

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಭಾನುವಾರ ಶಿವಮೊಗ್ಗ ಜಿಲ್ಲೆಯ ಹಲವೆಡೆ ದೇವಸ್ಥಾನಗಳಲ್ಲಿ ಪೂಜೆ, ಪುನಸ್ಕಾರಗಳ ಜತೆಗೆ ರಕ್ತದಾನ ಸೇರಿ ಹಲವು ಸೇವಾ ಕಾರ್ಯಗಳ ಮೂಲಕ ವಿಶಿಷ್ಟವಾಗಿ ಆಚರಣೆ ಮಾಡಲಾಯಿತು.
ನಗರದ ಬಿಜೆಪಿ ಕಚೇರಿಯಲ್ಲಿ ಯುವ ಮೋರ್ಚಾ ಕಾರ್ಯಕರ್ತರು ರಕ್ತದಾನ ಮಾಡುವ ಮೂಲಕ ಮೋದಿ ಜನ್ಮದಿನಕ್ಕೆ ಶುಭಾಶಯ ಕೋರಿದರು. ರೋಟರಿ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು.
ಮೋದಿ ಅವರ ಅಭಿಮಾನಿ ಅಂಗವಿಲಕ ಹರೀಶ್ ಎಂಬುವರು ರಕ್ತದಾನ ಮಾಡುವ ಮೂಲಕ ಇತರರಿಗೆ ಪ್ರೇರಣೆ ಆದರು. ಮೋದಿ ಜನ್ಮದಂದು ರಕ್ತದಾನ ಮಾಡಿದ ಅಭಿಮಾನಿಯನ್ನು ಭೇಟಿ ಮಾಡಿದ ಬಿ.ವೈ.ರಾಘವೇಂದ್ರ ಬೆನ್ನುತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ವಿಶ್ವ ಕರ್ಮ ಜಯಂತಿ ಉದ್ಘಾಟಿಸಿ 18 ಕರಕುಶಲಕರ್ಮಿಗಳನ್ನು ಸನ್ಮಾನಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿಗಳಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮುಖಂಡರಾದ ಎಸ್.ದತ್ತಾತ್ರಿ, ಎನ್.ಕೆ.ಜಗದೀಶ್, ದಿನದಯಾಳ್, ಮಾಲ್ತೇಶ್, ದರ್ಶನ್, ಕೆ.ವಿ.ಅಣ್ಣಪ್ಪ, ಪ್ರಭಾಕರ್, ಹೃಷಿಕೇಶ್ ಪೈ ಮತ್ತಿತರರಿದ್ದರು.
ಶಿವಮೊಗ್ಗ ನಗರ ಮಾತ್ರವಲ್ಲದೆ ಸಾಗರ, ಹೊಸನಗರ, ಶಿಕಾರಿಪುರ, ಸೊರಬ ಸೇರಿ ಜಿಲ್ಲೆಯ ಹಲವೆಡೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರಕ್ತದಾನ ಶಿಬಿರ ನಡೆಸಿದರು.