

ಅರಸೀಕೆರೆ: ತಾಲೂಕು ಆಡಳಿತ ವತಿಯಿಂದ ನಗರದ ತಾಲೂಕು ಕಚೇರಿ ಆವರಣದಲ್ಲಿರುವ ಕಂದಾಯ ಭವನದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಿರುವುದು ಬೇಸರ ತರಿಸಿದೆ ಎಂದು ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಒಕ್ಕಲಿಗ ಸಮಾಜದ ಮುಖಂಡ ಮೆಟ್ರೋಬಾಬು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಧುನಿಕ ಬೆಂಗಳೂರಿನ ನಿರ್ಮಾತೃ, ದೂರದೃಷ್ಟಿ ಹೊಂದಿದ್ದ ಐತಿಹಾಸಿಕ ವ್ಯಕ್ತಿಯ ಜಯಂತಿಯನ್ನು ನಾಲ್ಕು ಗೋಡೆಯೊಳಗೆ ಬೆರಳೆಣಿಕೆ ಜನರನ್ನು ಸೇರಿಸಿ ಆಚರಿಸಿದ್ದು ಅತೀವ ನೋವು ತರಿಸಿದೆ. ತಾಲೂಕು ಆಡಳಿತ ಎರಡು ತಿಂಗಳ ಹಿಂದೆ ಯಾವ ಮಹನೀಯರ ಜಯಂತಿಗಳನ್ನು ಅದ್ದೂರಿಯಾಗಿ ಹಮ್ಮಿಕೊಂಡಿತ್ತು ಎನ್ನುವುದು ಜಗಜ್ಜಾಹಿರ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಕೆಂಪೇಗೌಡರ ಜನ್ಮ ದಿನವನ್ನು ಕಾಟಾಚಾರಕ್ಕೆ ಮಾಡುವ ಮೂಲಕ ಅಪಮಾನ ಮಾಡಲಾಗಿದೆ. ಇಂತಹ ಬೆಳವಣಿಗೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಶನಿವಾರ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.