ಅರ್ಥಪೂರ್ಣವಾಗಿ ಧನ್ವಂತರಿ ಜಯಂತಿಯ ಆಚರಣೆ

neema
Published on

ಮಡಿಕೇರಿ: ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್‌ನ(ನೀಮಾ) ಕೊಡಗು ಜಿಲ್ಲಾ ಘಟಕದ ವತಿಯಿಂದ ಧನ್ವಂತರಿ ಜಯಂತಿ ಮತ್ತು ಬೆಳ್ಳಿ ಮಹೋತ್ಸವ ಸಮಾರಂಭ ಮಡಿಕೇರಿಯಲ್ಲಿ ಅರ್ಥಪೂರ್ಣವಾಗಿ ನಡೆಯಿತು.

ನಗರದ ಶ್ರೀ ಲಕ್ಷ್ಮಿ ನರಸಿಂಹ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ಗಣಪತಿ ಹೋಮ ಮತ್ತು ಧನ್ವಂತರಿ ಹವನ ಶ್ರದ್ಧಾಭಕ್ತಿಯಿಂದ ನಡೆಯಿತು. ಸಹಸ್ರಾಕ್ಷ, ಉಕ್ಕಿನಡ್ಕ ಡಾ.ಯು.ಜಯಗೋವಿಂದ ಸಮಾಜದ ಮೇಲೆ ನೀಮಾದ ಪ್ರಭಾವ ಎಂಬ ವಿಷಯದ ಕುರಿತು ಮಾತನಾಡಿ, ನೀಮಾ ಬೆಳ್ಳಿ ಮಹೋತ್ಸವದ ಸ್ಮರಣ ಸಂಚಿಕೆಯನ್ನೂ ಬಿಡುಗಡೆ ಮಾಡಿದರು. ಬೆಂಗಳೂರು ಕೆಎಯುಪಿಯ ಡಾ.ಎಂ.ಡಿ.ರಫಿ ಹಕೀಂ ಹಾಗೂ ಕೆಎಸ್‌ಬಿ ನೀಮಾ ಅಧ್ಯಕ್ಷರು ಮಾತನಾಡಿದರು.

ಸನ್ಮಾನ: ನೀಮಾ ಅಧ್ಯಕ್ಷ ಡಾ.ಎ.ಆರ್.ರಾಜಾರಾಮ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಧ್ಯಾಹ್ನ ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸ್ತಿಥ ರೋಗ ತಜ್ಞೆ ಡಾ.ಜಯಲಕ್ಷ್ಮಿ ಪಾಟ್ಕರ್, ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್, ಕೆವಿಜಿ ಪ್ರಾಂಶುಪಾಲ ಡಾ.ಡಿ.ವಿ.ಲೀಲಾಧರ್ ಹಾಗೂ ಕೊಡಗು ಡಿಎಒ ಡಾ.ಎಂ.ಶೈಲಜಾ ಪಾಲ್ಗೊಂಡಿದ್ದರು.

ವೈದ್ಯಕೀಯ ನಿರ್ಲಕ್ಷ್ಯ ಮತ್ತು ವೈದ್ಯರ ಅರಿವು ವಿಷಯದ ಕುರಿತು ಕೊಡಗು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಸಿ.ಕೆ.ಬಸವರಾಜ್ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಶುಭ ಮಾತನಾಡಿದರು. ನಂತರ ನೀಮಾ ಕೊಡಗು ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮ ಪ್ರಯುಕ್ತ ಸುಳ್ಯದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ನ ಸಹಯೋಗದೊಂದಿಗೆ ಆಯುರ್ವೇದ ಆರೋಗ್ಯ ಶಿಬಿರ ನಡೆಯಿತು. ಆಯುರ್ವೇದಿಕ್ ಪೋಸ್ಟರ್ಸ್, ಸ್ಟಾಲ್ಸ್ ಮತ್ತು ಔಷಧೀಯ ಸಸ್ಯಗಳ ಪ್ರದರ್ಶನ ಕೂಡ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net