

ಅವಿನಾಶ್ ಜೈನಹಳ್ಳಿ ಮೈಸೂರು
ನಗರದ ಕಲಾಸುರುಚಿ ಸಂಸ್ಥೆ ಮಕ್ಕಳಿಗಾಗಿ ಪ್ರತಿ ಶನಿವಾರ ಆಯೋಜಿಸುವ ‘ಕಥೆ ಕೇಳೋಣ ಬನ್ನಿ’ ಕಾರ್ಯಕ್ರಮ ಈಗ 750 ಕಂತು ಪೂರೈಸಲು ಸಿದ್ಧವಾಗಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಲಾಸುರುಚಿ ಸಂಸ್ಥೆಯು ಡಾ.ಎಚ್.ಕೆ. ರಾಮನಾಥ ಸ್ಮರಣೆ ಹಾಗೂ ‘ಕಥೆ ಕೇಳೋಣ ಬನ್ನಿ’ ಕಾರ್ಯಕ್ರಮವನ್ನು ಅ.23ರಂದು ಸಂಜೆ 4.30 ರಾಮಕೃಷ್ಣ ನಗರದ ನಟನ ರಂಗಮಂದಿರದಲ್ಲಿ ಆಯೋಜಿಸಿದೆ. ದೂರಸಂಪರ್ಕ ಇಲಾಖೆ ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ ಸಿ.ವಿ. ಗೋಪಿನಾಥ್, ಕನ್ನಡ ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ವಿಜಯಾ ಸಿಂಧುವಳ್ಳಿ, ಕೆ.ಎಸ್. ಆನಂದ್ ಬಾಬು ಭಾಗವಹಿಸುವರು.
ಡಾ.ಎಚ್.ಕೆ. ರಾಮನಾಥ ಅವರು ಮೈಸೂರಿನ ರಂಗಭೂಮಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ದಶಕಗಳ ಕಾಲ ದುಡಿದಿದ್ದು ಅವರ ನೆನಪು ಚಿರಸ್ಥಾಯಿಯಾಗುವಂತೆ ಮಾಡಿದ್ದಾರೆ. ಕಳೆದ 6 ದಶಕಗಳಲ್ಲಿ ನಟ, ನಿರ್ದೇಶಕ ಮತ್ತು ಲೇಖಕರಾಗಿ ಅವರು ರಂಗಭೂಮಿಯ ಹಲವು ಕ್ಷೇತ್ರಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು. ಕಲಾಸುರುಚಿ ತಂಡದ ಬೆನ್ನೆಲುಬಾಗಿದ್ದ ಅವರನ್ನು ಕಳೆದುಕೊಂಡು ಒಂದು ವರ್ಷವಾಗಿದ್ದರೂ ಅವರು ನೆಟ್ಟ ಗಿಡಗಳು ಇಂದು ಹೆಮ್ಮರವಾಗಿ ಬೆಳೆದಿವೆ. ಅವರು ಪೋಷಿಸಿದ ಕಥೆ ಕೇಳೋಣ ಬನ್ನಿ ಕಾರ್ಯಕ್ರಮ 750 ವಾರಗಳನ್ನು ಪೂರೈಸಿ ಇನ್ನೊಂದು ಮೈಲಿಗಲ್ಲನ್ನು ಸಾಧಿಸಿದೆ.
ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್:
ಮಕ್ಕಳಿಗೆ ನೀತಿ ಕತೆಗಳ ಮೂಲಕ ಸಂಸ್ಕೃತಿ ಪರಿಚಯಿಸಿ ಗುರು-ಹಿರಿಯರಲ್ಲಿ ಗೌರವ, ದೇಶಪ್ರೇಮ, ಆತ್ಮವಿಶ್ವಾಸದ ಸದ್ಗುಣಗಳನ್ನು ಮೈಗೂಡಿಸುವ ಉದ್ದೇಶದಿಂದ 2007ರ ಫೆಬ್ರವರಿ 3ರಂದು ಕಥೆ ಕೇಳೋಣ ಬನ್ನಿ ಕಾರ್ಯಕ್ರಮ ಪ್ರಾರಂಭಿಸಲಾಯಿತು. ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಕುವೆಂಪುನಗರದ ಚಿತ್ರಭಾನು ರಸ್ತೆಯ ಕಲಾಸುರುಚಿ ಸಂಸ್ಥೆಯಲ್ಲಿ ಸಂಸ್ಕೃತ ಶಿಕ್ಷಕ ವಿದ್ವಾನ್ ರಾಮಕೃಷ್ಣ ಸಭಾಹಿತ ಮಕ್ಕಳಿಗೆ ಕಥೆ ಹೇಳಿದರು. ಈ ಕಾರ್ಯಕ್ರಮ 2016ನೇ ಸಾಲಿನಲ್ಲಿ 483 ಕಂತುಗಳನ್ನು ಪೂರೈಸಿದ್ದಾಗಲೇ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ ಸೇರಿರುವುದು ವಿಶೇಷ. ಒಂದು ಗಂಟೆ ನಡೆಯುವ ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಥೆ ಹೇಳುವ ಮೂಲಕ ಮೌಲ್ಯಗಳನ್ನು ಕಲಿಸಲಾಗುತ್ತದೆ. ಮಕ್ಕಳಲ್ಲಿ ಆಲಿಸುವ ಸಾಮರ್ಥ್ಯ, ಪ್ರಶ್ನಿಸುವ ಮನೋಭಾವ, ಕುತೂಹಲ, ಹಾಸ್ಯ ಪ್ರವೃತ್ತಿ ಬೆಳೆಸುವ ಉದ್ದೇಶದಿಂದ ಕಲಾಸುರುಚಿ ಸಂಸ್ಥೆ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದೆ. ಪ್ರತಿ ಶನಿವಾರ ಸಂಜೆ 4.30ರಿಂದ 5.30ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮನರಂಜನೆ ಮೂಲಕ ನೀತಿ ಬೋಧಿಸಲಾಗುತ್ತದೆ. ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. 6 ವರ್ಷದಿಂದ 15 ವರ್ಷದವರೆಗಿನವರು ಪಾಲ್ಗೊಳ್ಳಲು ಅವಕಾಶ ಇದೆ. ಪ್ರತಿ ವಾರ 30-40 ಮಕ್ಕಳು ಕಥೆ ಕೇಳಲು ಬರುತ್ತಾರೆ. ಪ್ರತಿ ವಾರ ಕಥೆ ಕೇಳಲು ಸಾಂಸ್ಕೃತಿಕ ನಗರದ ವಿವಿಧ ಬಡಾವಣೆಗಳಿಂದ 4ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಹೆಚ್ಚಾಗಿ ಬರುತ್ತಾರೆ. ಪೌರಾಣಿಕ, ಐತಿಹಾಸಿಕ, ಕಾಲ್ಪನಿಕ, ಸಾಮಾಜಿಕ, ಶೌರ್ಯ, ಹಾಸ್ಯ ಪ್ರಧಾನ ಕಥೆಗಳನ್ನು ಹೇಳಲಾಗುತ್ತದೆ. ಸಾಹಿತಿಗಳು, ವಿಜ್ಞಾನಿಗಳು, ಶಿಕ್ಷಕರು, ವಕೀಲರು, ಕಲಾವಿದರು, ಅಧಿಕಾರಿಗಳು, ಗೃಹಿಣಿಯರು… ಹೀಗೆ ಅನೇಕರು ಪ್ರತಿ ವಾರ ಬಂದು ಮಕ್ಕಳಿಗೆ ಒಂದು ಗಂಟೆ ಕಥೆಗಳನ್ನು ಹೇಳುತ್ತಾರೆ. ಕಥೆ ಕೇಳೋಣ ಬನ್ನಿ ಕಾರ್ಯಕ್ರಮದ ಮೂಲ ಪರಿಕಲ್ಪನೆಯು ಸುಮನಾ ಹಾಗೂ ಶಶಿಧರ ಡೋಂಗ್ರೆ ಅವರದ್ದು. ಮುಖ್ಯ ಸಂಚಾಲಕ ಡಾ.ಎಚ್.ಕೆ. ರಾಮನಾಥ್ ದುಡಿದಿದ್ದರು.