ಬೆಳ್ತಂಗಡಿ: ಕರ್ನಾಟಕ ದಲಿತ ಚಳವಳಿಗೆ 50 ವಷರ್ ತುಂಬಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ದಲಿತ ಚಳವಳಿ 50ರ ಸಂಭ್ರಮ ಆಚರಣಾ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಈ ಸಮಿತಿಯ ನೇತೃತ್ವದಲ್ಲಿ ಅ.20ರಂದು ವಿಚಾರ ಸಂಕಿರಣ ಹಾಗೂ ಡಿ.16ರಂದು ಕರ್ನಾಟಕ ದಲಿತ ಚಳವಳಿ 50ರ ಸಂಭ್ರಮಾಚರಣೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಬಿ.ಕೆ.ವಸಂತ್ ಬೆಳ್ತಂಗಡಿ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 70ರ ದಶಕದ ಆರಂಭದಲ್ಲಿ ಪ್ರೊ.ಬಿ.ಕೃಷ್ಣಪ್ಪ ನೇತೃತ್ವದಲ್ಲಿ ಕರ್ನಾಟಕ ದಲಿತ ಸಂಘಷರ್ ಸಮಿತಿ ಎಂಬ ಹೆಸರಿನಲ್ಲಿ ರಾಜ್ಯದಲ್ಲಿ ಜನ್ಮ ತಾಳಿದ ದಲಿತ ಚಳವಳಿಗೆ ಅರ್ಧ ಶತಮಾನ ತುಂಬುತ್ತಿದೆ. ಇದರ ಸುವರ್ಣ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಸಮುದಾಯ ಪಕ್ಷ, ಸಂಘಟನೆಗಳ ಬೇಧವಿಲ್ಲದೆ ಗ್ರಾಮವಾರು, ಸಮುದಾಯವಾರು, ಪಕ್ಷವಾರು ಮುಖಂಡರು, ಯುವ ಕಾರ್ಯಕರ್ತರನ್ನೊಳಗೊಂಡ ಪೂರ್ಣ ಪ್ರಮಾಣದ ಸಮಿತಿಯನ್ನು ರಚಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ದಲಿತ ಚಳವಳಿ ನಡೆದು ಬಂದ ಹಾದಿಯ ಅವಲೋಕನ ನಡೆಯಲಿದೆ ಎಂದರು.
ಕಾರ್ಯಕ್ರಮದ ದಿನ ಬೃಹತ್ ಮೆರವಣಿಗೆ, ಸಮಾವೇಶ ನಡೆಯಲಿದ್ದು, ತಾಲೂಕಿನಾದ್ಯಂತ ದಲಿತ ಚಳವಳಿಯನ್ನು ಕಟ್ಟಲು ಶ್ರಮಿಸಿ ಅಗಲಿದ ಅನೇಕ ಹಿರಿಯ ಚೇತನಗಳ ಸ್ಮರಣೆ, ಹಿರಿಯ ನಾಯಕರಿಗೆ, ಕಾರ್ಯಕರ್ತರಿಗೆ ಗೌರವಾರ್ಪಣೆ ನಡೆಯಲಿದೆ. ಮೊದಲ ಹಂತವಾಗಿ ಅ.20ಕ್ಕೆ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದರು.
ಸಮಿತಿಯ ಮಾಧ್ಯಮ ಸಲಹೆಗಾರ ರಘು ಧರ್ಮಸೇನ, ಗೌರವಾಧ್ಯಕ್ಷ ಚೆನ್ನಕೇಶವ, ಕಾರ್ಯಾಧ್ಯಕ್ಷರಾದ ಶೇಖರ ಕುಕ್ಕೇಡಿ, ಎಸ್. ಬೇಬಿ ಸುವರ್ಣ ಸೋಣಂದೂರು, ನೇಮಿರಾಜ್ ಕಿಲ್ಲೂರು, ರಮೇಶ್ ಆರ್ ಬೆಳ್ತಂಗಡಿ, ಉಪಾಧ್ಯಕ್ಷರಾದ ಜಯಾನಂದ ಪಿಲಿಕಳ, ವೆಂಕಣ್ಣ ಕೊಯ್ಯೂರು, ಪಿ.ಕೆ. ರಾಜು ಪಡಂಗಡಿ, ರವಿ ಕುಮಾರ್ ಮುಂಡಾಜೆ, ಚಂದ್ರಾವತಿ ಉಜಿರೆ, ಗೌರವ ಸಲಹೆಗಾರರಾದ ಈಶ್ವರ ಬೈರ ಲಾಯಿಲ, ಪದ್ಮನಾಭ ಗರ್ಡಾಡಿ, ಬಾಬು ಎಂ ಬೆಳಾಲು, ಸವಿತಾ ಎನ್ ಅಂಟ್ರಿಂಜೆ ಸುಳ್ಕೇರಿ, ಕೂಸ ಅಳದಂಗಡಿ, ಶಿವಪ್ಪ ಗರ್ಡಾಡಿ, ಮಾಧ್ಯಮ ಸಲಹೆಗಾರ ಶೇಖರ ಎಲ್ ಲಾಯಿಲ ಉಪಸ್ಥಿತರಿದ್ದರು.