

ಮಂಗಳೂರು: ಎಸ್‌ಸಿಎಸ್ ಆಸ್ಪತ್ರೆ ಮಂಗಳೂರು ಇದರ 38 ವರ್ಷಗಳ ಶ್ರೇಷ್ಠ ನಿಸ್ವಾರ್ಥ ಸೇವೆಯ ಸಂಭ್ರಮಾಚರಣೆ ಮತ್ತ್ತು ಫುಜಿಫಿಲ್ಮ್ ಜಪಾನ್‌ನ 128 ಸ್ಲೈಸ್ ಕಾರ್ಡಿಯಕ್ ಸಿಟಿ ಸ್ಕ್ಯಾನರ್, ಆಧುನಿಕ ರೇಡಿಯಾಲಜಿ ವಿಭಾಗ ಮತ್ತು ಎನ್‌ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯದ ಉದ್ಘಾಟನೆಯನ್ನು ಸಂಸದ ಕ್ಯಾ.ಬೃಜೇಶ್ ಚೌಟ ಉದ್ಘಾಟಿಸಿ ಹೃದಯದ ಆರೈಕೆಯ ಹೊಸ ಯುಗಕ್ಕೆ ಚಾಲನೆ ನೀಡಿದರು.
ಸಂಸದ ಕ್ಯಾ.ಬೃಜೇಶ್ ಚೌಟ ಮಾತನಾಡಿ, ಎಸ್‌ಸಿಎಸ್ ಆಸ್ಪತ್ರೆ ಪ್ರಪ್ರಥಮವಾಗಿ ರೋಗದ ಮೂಲವನ್ನು ಪತ್ತೆ ಹಚ್ಚುವ ಯಂತ್ರವನ್ನು ಲೋಕಾರ್ಪಣೆ ಮಾಡಿರುವುದಕ್ಕೆ ಅಭಿನಂದಿಸುತ್ತೇನೆ. ಇದೊಂದು ಉತ್ತಮ ಹೆಜ್ಜೆ ಯಾವುದೇ ರೋಗವನ್ನು ಮೂಲದಿಂದ ಪತ್ತೆ ಹಚ್ಚಿ ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವುದು ಒಂದು ಉತ್ತಮ ಕಾರ್ಯ. ಕೆಲವೊಂದು ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ರೋಗದ ಮೂಲದ ಪತ್ತೆ ಕಾರ್ಯ ನಡೆಯದೆ ತಪ್ಪಾಗಿ ಚಿಕಿತ್ಸೆ ನಡೆದರೂ ಮುಂದೆ ಸಮಸ್ಯೆ ಆಗುತ್ತದೆ. ಆ ನಿಟ್ಟಿನಲ್ಲಿ ಮಂಗಳೂರು ದೇಶದಲ್ಲಿ ಒಂದು ಮಾದರಿ ನಗರ ಎಂದು ನಾನು ನಂಬಿದ್ದೇನೆ. ಮಂಗಳೂರು ಒಂದು ಸಣ್ಣ ನಗರವಾದರೂ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಅಸಾಮಾನ್ಯವಾದದ್ದು ಎಂದರು. ಇದೆ ಸಂಧರ್ಭ ಸಂಸದರು ಎಸ್‌ಸಿಎಸ್ ಆಸ್ಪತ್ರೆಯ ನೂತನ ವೆಬ್‌ಸೈಟ್ ಅನ್ನು ಬಿಡುಗಡೆಗೊಳಿಸಿದರು.
ರಾಮಕೃಷ್ಣ ಆಶ್ರಮದ ಸ್ವಾಮಿ ಜೀತಕಾಮಾನಂದ ಸ್ವಾಮೀಜಿ ಮಾತನಾಡಿ, ಎಸ್‌ಸಿಎಸ್ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉತ್ತಮವಾಗಿ ಚಿಕಿತ್ಸೆ ದೊರೆಯುತ್ತಿದ್ದು ಸಂಸ್ಥೆಯಲ್ಲಿ ಇರುವ ಸೇವಾ ನಿರತರ ಸೇವೆ ರೋಗಿಗಳಿಗೆ ಅತ್ಯುತ್ತಮವಾಗಿದೆ ಎಂದರು.
ಶಾಸಕ ವೇದವ್ಯಾಸ ಕಾಮತ್, ಹಿರಿಯ ನರರೋಗ ತಜ್ಞ ಡಾ. ಐ.ಜಿ. ಭಟ್, ಸಿಟಿ ಆಸ್ಪತ್ರೆಯ ಸಿಎಂಡಿ ಡಾ. ಕೆ. ಭಾಸ್ಕರ್ ಶೆಟ್ಟಿ, ಫುಜಿಫಿಲ್ಮ್ ಸಂಸ್ಥೆಯ ನಾಗರಾಜ್ ಕೆಂಪಯ್ಯ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಸುನಿಲ್ ಆಚಾರ್, ಸಾಯಿರಾಂ, ರವಿ ಶಂಕರ್ ಮಿಜಾರ್, ಎಂ ಬಿ ಪುರಾಣಿಕ್, ಇಸ್ಕಾನ್ ಸಂಸ್ಥೆಯ ಸ್ವಾಮೀಜಿಗಳು, ಮತ್ತಿತರ ಗಣ್ಯರು, ವೈದ್ಯಕೀಯ ವೃತ್ತಿಪರರು ಮತ್ತು ಆಸ್ಪತ್ರೆಯ ಹಿತೈಷಿಗಳು ಭಾಗವಹಿಸಿದ್ದರು.
ಎಸ್‌ಸಿಎಸ್ ಆಸ್ಪತ್ರೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಜೀವರಾಜ್ ಸೋರಕೆ ಅಧ್ಯಕ್ಷತೆ ವಹಿಸಿದ್ದರು. ಎಸ್‌ಸಿಎಸ್ ಆಸ್ಪತ್ರೆಯ ಕ್ಲಿನಿಕಲ್ ಡೈರೆಕ್ಟರ್ ಡಾ. ಚಂದ್ರಶೇಖರ್ ಜೆ. ಸೊರಕೆ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಡಾ.ಮಲ್ಲಿಕಾರ್ಜುನ ಪ್ರಾಸ್ತಾವಿಸಿದರು. ಸ್ನೇಹ ಕಾರ್ಯಕ್ರಮ ನಿರೂಪಿಸಿದರು.
-------------
ಫುಜಿಫಿಲ್ಮ್ ಜಪಾನ್ ಸಂಸ್ಥೆ ನಿರ್ಮಿಸಿದ ಅತ್ಯಾಧುನಿಕ 128 ಸ್ಲೈಸ್ ಸಿನೇರಿಯಾ ವ್ಯೆ ಕಾರ್ಡಿಯಾಕ್ ಸಿಟಿ ಸ್ಕ್ಯಾನರ್, ಅಧುನಿಕ ಡಯಾಗ್ನೋಸ್ಟಿಕ್ ವಿಭಾಗ ಮತ್ತು ಇಂಟರ್‌ವೆನ್ಶನ್ ರೇಡಿಯಾಲಜಿ ವಿಭಾಗ ಮತ್ತು ಎನ್‌ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯವನ್ನು ಉದ್ಘಾಟಿಸಲಾಯಿತು. ಈ ನೂತನ ಸೇವೆಗಳು ರೋಗನಿರ್ಣಯ ಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಒದಗಿಸುವ ಮೂಲಕ ಆಸ್ಪತ್ರೆಯ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತವೆ. ಫುಜಿಫಿಲ್ಮ್ ಸಿನೇರಿಯಾ ಜಪಾನಿನ ತಂತ್ರಜ್ಞಾನ ಮತ್ತು ನಿಖರತೆಯ ಸಂಕೇತವಾಗಿದ್ದು, ಹೃದಯ ಚಿಕಿತ್ಸಾ ಕ್ಷೇತ್ರದಲ್ಲಿ ವೈದ್ಯರು ಮತ್ತು ರೋಗಿಗಳಿಗೆ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ.