

ಚಿತ್ರದುರ್ಗ: ಯುಗಾದಿ ಹಿಂದುಗಳ ದೊಡ್ಡ ಹಬ್ಬ. ಮನೆಯಲ್ಲಿ ಅಮ್ಮ, ಅಜ್ಜಿಯಿಂದ ಮನೆ ಮಂದಿಯೆಲ್ಲ ಎಣ್ಣೆ ಹಚ್ಚಿಸಿಕೊಳ್ಳುತ್ತಾರೆ. ಕಿರಿಯರೆಲ್ಲ ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಆದರೆ ಇಲ್ಲಿನ ಪರಿಸ್ಥಿತಿ ಭಿನ್ನ. ಇವರಿಗೆ ಮನೆಯಿಲ್ಲ, ತಮ್ಮವರು ಎನ್ನುವವರೂ ಇಲ್ಲ. ಆದರೂ ಬುಧವಾರ ಅವರಿಗೆಲ್ಲ ಎಣ್ಣೆ ಮಜ್ಜನದ ಸಂಭ್ರಮ...
ಅಂದ ಹಾಗೆ ಈ ಹೃದಯಸ್ಪ್ಪರ್ಶಿ ಕ್ಷಣಗಳಿಗೆ ಸಾಕ್ಷಿಯಾದದ್ದು ತಾಲೂಕಿನ ಗೋನೂರು ನಿರಾಶ್ರಿತರ ಕೇಂದ್ರ. ಹಲವು ಕಾರಣಗಳಿಂದ ನಿರಾಶ್ರಿತರ ಕೇಂದ್ರ ಸೇರಿದ ಹಲವರು ದ್ವೇಷ, ಅಸೂಯೆ ಭಾವನೆ ಮೈಗೂಡಿಸಿಕೊಳ್ಳದೆ ಅಣ್ಣ-ತಮ್ಮಂದಿರಂತೆ, ಅಕ್ಕ-ತಂಗಿಯರಂತೆ ಬದುಕುತ್ತಿದ್ದಾರೆ. ಇದರಲ್ಲಿ ಕೆಲವರು ಅರೆ ಬುದ್ಧಿಮಾಂದ್ಯರು, ಅಂಗವಿಕಲರು, ಮಕ್ಕಳಿಂದ ದೂರವಾದ ವಯೋವೃದ್ಧರು ಇದ್ದಾರೆ. ಬುಧವಾರ ಅವರೆಲ್ಲ ಸಾಮೂಹಿಕವಾಗಿ ಎಣ್ಣೆ ಹಚ್ಚಿಕೊಂಡು ಸಂಭ್ರಮದಲ್ಲಿ ತೇಲಾಡಿದರು. ಯಾರಲ್ಲೂ ಅನಾಥ ಪ್ರಜ್ಞೆಯಾಗಲಿ, ಜಾತಿ-ಭೇದವಾಗಲಿ ಕಾಡಲಿಲ್ಲ. ಅಲ್ಲೊಂದು ದೊಡ್ಡ ಕೂಡುಕುಟುಂಬವಿದೆಯೇನೋ ಎಂಬಂತೆ ಭಾಸವಾಯಿತು.
ಇಲ್ಲಿ ಒಟ್ಟು 432 ಮಂದಿ ಆಶ್ರಯ ಪಡೆಯುತ್ತಿದ್ದು, ಒಬ್ಬರಿಗೊಬ್ಬರು ಎಣ್ಣೆ ಹಚ್ಚುತ್ತ ಸಹಕಾರ ನೀಡಿ ಸ್ನೇಹ-ಬಾಂಧವ್ಯಕ್ಕೆ ಸಾಕ್ಷಿಯಾದರು. ಸಂತಸದಲ್ಲಿದ್ದ ಎಲ್ಲರೂ ಕೆಲಕಾಲ ಕೇಂದ್ರದ ಸುತ್ತ ಸುತ್ತಾಡಿದರು. 348 ಪುರುಷರು, 84 ಮಹಿಳೆಯರಿದ್ದು, ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸಮಾಜ ಕಲ್ಯಾಣ ಇಲಾಖೆಯಿಂದ ನಿರಾಶ್ರಿತರಿಗೆ ಹೊಸ ಬಟ್ಟೆ ಹಾಗೂ ಕೇಂದ್ರದಿಂದ 25 ಮಂದಿಗೆ ಯೂನಿಫಾರ್ಮ್ ವಿತರಿಸಲಾಯಿತು. ನಂತರ ಎಲ್ಲರ ಅಭ್ಯಂಜನ ಸ್ನಾನ ಮುಗಿದ ಬಳಿಕ ಒಗ್ಗೂಡಿ ಹಬ್ಬ ಆಚರಿಸಲಾಯಿತು. ಸಾಮೂಹಿಕ ಆಚರಣೆಯಾದ್ದರಿಂದ ಹೊಸಬರ ಗಮನ ಸೆಳೆಯಿತು.
ನಿರಾಶ್ರಿತರಿಗಾಗಿ ಕೇಂದ್ರದಲ್ಲಿ ಹೋಳಿಗೆ, ಕೋಸುಂಬರಿ, ತರಕಾರಿ ಗೊಜ್ಜು, ಹೋಳಿಗೆ ಸಾಂಬಾರ್, ಅನ್ನ, ತಿಳಿ ಸಾಂಬಾರ್ ಸೇರಿ ತರಹೇವಾರಿ ಖಾದ್ಯ ಸಿದ್ಧಪಡಿಸಲಾಗಿತ್ತು. ಎಲ್ಲರೂ ಹಬ್ಬದೂಟ ಸವಿದರು. ಗೋನೂರು ನಿರಾಶ್ರಿತರ ಕೇಂದ್ರದ ಅಧೀಕ್ಷಕ ಮಹದೇವಯ್ಯ, ಸಿಬ್ಬಂದಿಗಳಾದ ರಮೇಶ್, ದೇವರಾಜ್, ಪಾಲಯ್ಯ, ಶಶಿಕುಮಾರ್, ಗಗನ್, ವಿಜಯಕುಮಾರ್ ಇತರರಿದ್ದರು.
* ಮನೆಗಳಲ್ಲೂ ಸಂಭ್ರಮ
ಜಿಲ್ಲೆ ಸೇರಿ ನಗರದಲ್ಲೂ ಕಿರಿಯರಿಂದ ಹಿರಿಯರವರೆಗೂ ಎಣ್ಣೆ ಹಚ್ಚಿಕೊಂಡು ಯುಗಾದಿ ಹಬ್ಬವನ್ನು ಆತ್ಮೀಯವಾಗಿ ಸ್ವಾಗತಿಸಿದರು. ಯುವಕರ ಪೈಕಿ ಅನೇಕರು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತ ಗಮನ ಸೆಳೆದರು.
ಮನೆಗಳ ಮುಂಬಾಗಿಲು, ದೇವರ ಮನೆಯ ಬಾಗಿಲುಗಳಿಗೆ ಹಸಿರು ಮಾವಿನ ಎಲೆ ಮಧ್ಯೆ ಬೇವಿನ ಎಲೆ ಗೋಂಚಲು, ಪುಷ್ಪಗಳಿಂದ ತಳಿರು-ತೋರಣ ಸಿದ್ಧಪಡಿಸಿ ಕಟ್ಟಿದ್ದರು. ಮಹಿಳೆಯರು ಆವರಣದಲ್ಲಿ ಆಕರ್ಷಕವಾಗಿ ರಂಗೋಲಿಗಳನ್ನು ಹಾಕಿ ವಿವಿಧ ವರ್ಣದಿಂದ ಸಿಂಗರಿಸಿದ್ದರು.
ಅಭ್ಯಂಜನ ಸ್ನಾನ ಉತ್ತಮ ಆರೋಗ್ಯಕ್ಕೆ ಪೂರಕವಾಗಿದ್ದು, ನೀರಿಗೆ ಎಣ್ಣೆ, ಬೇವಿನ ಎಲೆ ಬೆರೆಸಿ ಸ್ನಾನದ ಬಳಿಕ ಪುಣ್ಯಾಹ ಮಂತ್ರಗಳನ್ನು ಪಠಿಸಿ, ಮಾವಿನ ಎಲೆಯಿಂದ ಮನೆಯ ಎಲ್ಲೆಡೆ ಕಳಶದ ನೀರನ್ನು ಪ್ರೋಕ್ಷಿಸಿ ಸಂಪ್ರದಾಯದಂತೆ ಆಚರಿಸಿದರು. ಶುಭ್ರ ಹೊಸ ಬಟ್ಟೆ ಧರಿಸಿ, ಸೂರ್ಯ ನಮಸ್ಕಾರ, ದೇವರಿಗೆ ಪೂಜೆ ಸಲ್ಲಿಸಿ ದೇಗುಲಗಳತ್ತ ತೆರಳಿದರು. ಹಲವೆಡೆ ವರ್ಷದ ಫಲವನ್ನು ಸೂಚಿಸುವ ಪಂಚಾಂಗ ಶ್ರಾವಣ ಕಾರ್ಯಕ್ರಮ ನಡೆಯಿತು.
ಗ್ರಾಮೀಣ ಭಾಗಗಳಲ್ಲಿ ವಿಶೇಷಾಚರಣೆ
ಬುಡಕಟ್ಟು ಹಾಗೂ ಬಯಲುಸೀಮೆಯ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಜೋಳ, ಹತ್ತಿ, ಮುಸುಕಿನ ಜೋಳ, ಸೂರ್ಯಕಾಂತಿ, ಕಡಲೆ ಕಠಾವು ಮಾಡಿ ಹೊಸ ಧಾನ್ಯಗಳನ್ನು ಮನೆ ತುಂಬಿಸಿಕೊಳ್ಳುವ ಮೂಲಕ ಅನ್ನದಾತರು ಯುಗಾದಿ ಹಬ್ಬ ಸಡಗರದಿಂದ ಆಚರಿಸಿದರು. ಮಾವಿನಕಾಯಿ, ಹುಣಿಸೇಹಣ್ಣು, ಮೆಣಸು, ಉಪ್ಪು, ಬೆಲ್ಲ, ಬೇವು ಇತರೆ ಪದಾರ್ಥಗಳನ್ನು ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ತಯಾರಿಸಿ ಅದನ್ನು ಸೇವಿಸುವ ಮೂಲಕವೂ ಕೆಲವರಿಂದ ವಿಶೇಷ ಆಚರಣೆ ನಡೆಯಿತು.