ಹಬ್ಬಗಳನ್ನು ಶಾಂತಿಯುತವಾಗಿ ವಿಜೃಂಭಣೆಯಿಂದ ಆಚರಿಸಿ

27 ckm 4
ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಡಿಸಿ ಮೀನಾ ನಾಗರಾಜ್ ಹಾಗೂ ಎಸ್‌ಪಿ ವಿಕ್ರಮ ಅಮಟೆ ನೇತೃತ್ವದಲ್ಲಿ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಅಂಗವಾಗಿ ವಿವಿಧ ಸಮುದಾಯದ ಮುಖಂಡರನ್ನೊಳಗೊAಡ ಶಾಂತಿ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್, ಉಪಾಧ್ಯಕ್ಷೆ ಅನು ಮಧುಕರ್, ಸಿಡಿಎ ಅಧ್ಯಕ್ಷ ನಯಾಜ್, ಎಎಸ್‌ಪಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
Published on

ಚಿಕ್ಕಮಗಳೂರು: ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳು ಈ ಬಾರಿಯೂ ಒಟ್ಟೊಟ್ಟಿಗೆ ಬಂದಿದ್ದು, ಹಬ್ಬಗಳನ್ನು ಪರಿಸರ ಸ್ನೇಹಿಯಾಗಿ ಶಾಂತಿಯುತವಾಗಿ ವಿಜೃಂಭಣೆಯಿಂದ ಆಚರಿಸಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಜಿಲ್ಲಾ ರಕ್ಷಣಾಧಿಕಾರಿ ವಿಕ್ರಮ ಅಮಟೆ ತಿಳಿಸಿದರು.

ನಗರದ ಮಂಗಳವಾರ ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಅಂಗವಾಗಿ ವಿವಿಧ ಸಮಾಜದ ಮುಖಂಡರನ್ನು ಒಳಗೊಂಡ ಶಾಂತಿ ಸಮಿತಿ ಸಭೆ ನಡೆಸಿ ಮಾತನಾಡಿದ ಅವರು, ಶಾಂತಿಯುತವಾಗಿ ಹಬ್ಬವನ್ನು ಆಚರಿಸಲು ಎಲ್ಲರೂ ಸಹಕಾರ ನೀಡಬೇಕು ಎಂದರು.
ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ 1778 ಗಣಪತಿ ಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಇದರಲ್ಲಿ ಏಳು ಗಣೇಶ ಮೆರವಣಿಗೆಗಳನ್ನು ಅತಿ ಸೂಕ್ಷ್ಮ, 158 ಗಣೇಶ ಮೆರವಣಿಗೆಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದೆ. ಅದೇ ರೀತಿ ಜಿಲ್ಲೆಯಲ್ಲಿ 27 ಕಡೆ ಪ್ರಮುಖವಾಗಿ ಈದ್ ಮಿಲಾದ್ ಮೆರವಣಿಗೆ ನಡೆಯುತ್ತದೆ. ಇದರಲ್ಲಿ ನಾಲ್ಕು ಮೆರವಣಿಗೆಗಳನ್ನು ಎಂದು ಗುರುತಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಸಂಘಟನೆಗಳು ಸಂಭವಿಸಿಲ್ಲ. ಈ ಬಾರಿಯೂ ಇಂದಿನಂತೆಯೇ ಶಾಂತಿಯುತವಾಗಿ ಹಬ್ಬವನ್ನು ಆಚರಿಸಲು ಎಲ್ಲ ಸಂಘಟಕರು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ವೇಳೆ ಗಣಪತಿ ವಿಗ್ರಹಗಳು ವಿದ್ಯುತ್ ಲೈನಿಗೆ ತಾಕುವಂತಿರುತ್ತವೆ. ಈ ಬಾರಿ ಧಾರಾಕಾರ ಮಳೆಯಿಂದಾಗಿ ವಿದ್ಯುತ್ ಕಂಬಗಳು ವಾಲಿರುವುದರಿಂದ ವಿದ್ಯುತ್ ತಂತಿಗಳು ತಳಭಾಗದಲ್ಲಿಯೇ ಇವೆ. ಹೀಗಾಗಿ ಗಣಪತಿ ಮೆರವಣಿಗೆಗೆ ಮೊದಲು ಆಯೋಜಕರು ಮೆರವಣಿಗೆ ನಡೆಯುವ ಮಾರ್ಗವನ್ನು ಪರಿಶೀಲನೆ ನಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಪಂ ಸಿಇಒ ಎಚ್.ಎಸ್.ಕೀರ್ತನಾ ಮಾತನಾಡಿ, ಒಂದು ಹಬ್ಬ ಚೆನ್ನಾಗಿ ನಡೆದರೆ ಅದನ್ನು ಮುಂದಿನ ಹಬ್ಬದವರೆಗೂ ಮೆಲುಕು ಹಾಕುತ್ತೇವೆ. ಹಬ್ಬದ ಸಂದರ್ಭದಲ್ಲಿ ಒಂದು ಅವಘಡ ನಡೆದರೂ ಅದರ ಪರಿಣಾಮ ಬೇರೆಯೇ ಆಗಿರುತ್ತದೆ. ಜೊತೆಗೆ ನೂರು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್, ಉಪಾಧ್ಯಕ್ಷ ಅನುಮದುಕರ್, ಸಿಡಿಎ ಅಧ್ಯಕ್ಷ ನಯಾಜ್, ಎಎಸ್ ಪಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಪಿಒಪಿ ವಿಗ್ರಹಗಳಿಗಿಲ್ಲ ಅವಕಾಶ
ಗಣೇಶೋತ್ಸವದ ಸಂದರ್ಭದಲ್ಲಿ ಪಿಒಪಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅವಕಾಶವಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಈ ರೀತಿಯ ಮೂರ್ತಿಗಳ ಮಾರಾಟಕ್ಕೆ ನಿಷೇಧ ಹೇರಲಾಗಿದೆ ಎಂದು ಎಸ್ಪಿ ವಿಕ್ರಮ ಅಮಟೆ ತಿಳಿಸಿದರು.
ಇದಲ್ಲದೆ ಹಸಿರು ಪಟಾಕಿಗಳನ್ನು ಸಿಡಿಸಲು ಮಾತ್ರ ಅವಕಾಶ ನೀಡಲಾಗಿದೆ. ರಾತ್ರಿ ಎಂಟು ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಬಹುದಾಗಿದೆ. ಇದಲ್ಲದೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕ ಅಳವಡಿಕೆಗೆ ಅವಕಾಶವಿಲ್ಲ. ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ಫ್ಲೆಕ್ಸ್ ಅಳವಡಿಕೆಗೆ ಅನುಮತಿ ಕಡ್ಡಾಯ
ಗೌರಿ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಕ್ಕೆ ಫ್ಲೆಕ್ಸ್ ಬಂಟಿಂಗ್ ಬ್ಯಾನರ್ ಕಟ್ಟಲು ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ ಎಂದು ಎಸ್ಪಿ ವಿಕ್ರಮ ಅಮಟೆ ತಿಳಿಸಿದರು.
ಪ್ರಚೋದನಕಾರಿ ಬರಹಗಳು ಹಾಗೂ ಅನ್ಯ ಧರ್ಮದವರ ಬಾವನಗಳಿಗೆ ಧಕ್ಕೆಯಾಗುವಂತ ಫ್ಲೆಕ್ಸ್ ಹಾಗೂ ಬ್ಯಾನರ್ ಗಳಿಗೆ ಅವಕಾಶವಿಲ್ಲ. ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳು ಒಂದೇ ಸಮಯಕ್ಕೆ ಬಂದಿರುವುದರಿಂದಾಗಿ ಸಮನ್ವಯತೆ ಕಾಪಾಡಿಕೊಂಡು ಬ್ಯಾನರ್ ಅಳವಡಿಸಿಕೊಳ್ಳಬೇಕು. ಬ್ಯಾನರ್ ಅಳವಡಿಕೆ ಮಾಡುವ ಸಂದರ್ಭದಲ್ಲಿ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿದ್ದಲ್ಲಿ ಅವರು ಆ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಸಿಂಗಲ್ ವಿಂಡೋ ಸಿಸ್ಟಮ್
ಗಣೇಶೋತ್ಸವ ಹಾಗೂ ಈ ಜಿಲ್ಲಾ ಆಚರಣೆಗೆ ಅನುಮತಿ ನೀಡಲು ಸಿಂಗಲ್ ವಿಂಡೋ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಅರ್ಜಿ ಸಲ್ಲಿಸುವ ಮೂಲಕ ಹಬ್ಬ ಆಚರಣೆಗೆ ಪರವಾನಗಿ ಪಡೆಯಬೇಕು. ಸಾರ್ವಜನಿಕರು ಒಂದೊಂದು ಅನುಮತಿ ಪಡೆಯಲು ಒಂದೊಂದು ಕಚೇರಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಈ ಏಕ ಕಿಂಡಿ ವ್ಯವಸ್ಥೆ ಮಾಡಲಾಗಿದೆ ಎಂದು ಎಸ್.ಪಿ.ವಿಕ್ರಮ ಅಮಟೆ ತಿಳಿದರು.
ತಾಲೂಕು ಮಟ್ಟದಲ್ಲಿ ಏಕ ತಿಂಡಿ ವ್ಯವಸ್ಥೆ ಜಾರಿಗೆ ತರಲಾಗುವುದು. ಇದಲ್ಲದೆ ಎಲ್ಲಿ ಹೆಚ್ಚು ಗಣೇಶ ಪ್ರತಿಷ್ಠಾಪನೆ ಆಗುತ್ತದೆಯೋ ಆ ಹೋಬಳಿಗಳಲ್ಲಿಯೂ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಆಗಸ್ಟ್ 28ರಿಂದ ಸೆಪ್ಟೆಂಬರ್ 3ರವರೆಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸ್ವಯಂ ಸೇವಕರ ನೇಮಕಕ್ಕೆ ಸೂಚನೆ
ಗಣೇಶ್ೋತ್ಸವದ ಮೆರವಣಿಗೆ ಹಾಗೂ ಈದ್ ಮಿಲಾದ್ ಮೆರವಣಿಗೆ ವೇಳೆ ಸಂಬಂಧಿಸಿದವರು ಸ್ವಯಂಸೇವಕರನ್ನು ನೇಮಿಸಿಕೊಳ್ಳುವುದರಿಂದ ಮೆರವಣಿಗೆ ಸಂದರ್ಭದಲ್ಲಿ ಆಗುವ ಸಣ್ಣಪುಟ್ಟ ಗೊಂದಲಗಳನ್ನು ಶೀಘ್ರವೇ ಸರಿ ಪಡಿಸಲು ಸಾಧ್ಯವಾಗುತ್ತದೆ ಎಂದು ವಿಕ್ರಮ ಅಮಟೆ ತಿಳಿಸಿದರು.
ಪೊಲೀಸರೊಂದಿಗೆ ಸ್ವಯಂಸೇವಕರು ಇದ್ದಾಗ ಮೆರವಣಿಗೆಯನ್ನು ಸರಿಯಾಗಿ ನಿಯಂತ್ರಿಸುವ ಜೊತೆಗೆ, ಸ್ಥಳೀಯರೇ ಸ್ವಯಂಸೇವಕರು ಆಗಿರುವುದರಿಂದ ಯಾವುದೇ ಗೊಂದಲಕ್ಕೂ ಅವಕಾಶವಿರುವುದಿಲ್ಲ. ಮೆರವಣಿಗೆಯಲ್ಲಿ ಎಷ್ಟು ಜನ ಸೇರುತ್ತಾರೆ ಅದರಲ್ಲಿ ಶೇ. 5ರಷ್ಟು ಸ್ವಯಂಸೇವಕರನ್ನು ನೇಮಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಬಾರಿ ಯಾರು ಇತರರಿಗೆ ಮಾದರಿಯಾಗುವಂತೆ ಪರಿಸರ ಸ್ನೇಹಿ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಆಚರಣೆ ಮಾಡುತ್ತಾರೆ ಅಂತವರಿಗೆ ಈ ವರ್ಷದಿಂದ ತಾಲೂಕು ಮಟ್ಟದಲ್ಲಿ ಪ್ರಥಮ ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲು ಜಿಲ್ಲಾ ಆಡಳಿತದಿಂದ ತೀರ್ಮಾನಿಸಲಾಗಿದೆ.
ವಿಕ್ರಮ ಅಮಟೆ, ಎಸ್ ಪಿ ಚಿಕ್ಕಮಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net