

ಕುಶಾಲನಗರ: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶೋತ್ಸವ ಆಚರಣೆ ಸಮಿತಿ ಪದಾಧಿಕಾರಿಗಳ ಸಭೆಯನ್ನು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ನಡೆಸಲಾಯಿತು. ಸಭೆಯನ್ನು ಉದ್ದೇಶಿಸಿ ಸೋಮವಾರಪೇಟೆ ವಿಭಾಗದ ಡಿವೈಎಸ್ಪಿ ಆರ್.ವಿ.ಗಂಗಾಧರ್ ಮಾತನಾಡಿ, ಭಾರತ ದೇಶವು ವಿಶ್ವದಲ್ಲಿ ಹೆಚ್ಚು ಹಬ್ಬಗಳನ್ನು ಆಚರಿಸುವ ದೇಶವಾಗಿದೆ. ಗಣಪತಿ ಹಬ್ಬವನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಹಬ್ಬವನ್ನು ಸಂಭ್ರಮ ಹಾಗೂ ಶಾಂತಿಯುತವಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಆಚರಿಸಲು ಸಲಹೆ ನೀಡಿದರು.
ಕಾನೂನಿನ ನೀತಿ ನಿಯಮಗಳನ್ನು ಪಾಲಿಸಿ, ಇಲ್ಲದಿದ್ದರೆ ಕಠಿಣ ಕ್ರಮವನ್ನು ಪೊಲೀಸ್ ಇಲಾಖೆ ಕೈಗೊಳ್ಳುತ್ತದೆ. ಇಲಾಖೆಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡುತ್ತೇವೆ. ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಿ, ರಾತ್ರಿ 6 ಗಂಟೆಯಿಂದ 10 ಗಂಟೆಯವರೆಗೆ ಮೆರವಣಿಗೆ, ಡಿಜೆಗಳನ್ನು ಮುಕ್ತಾಯಗೊಳಿಸಿ, ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೊದಲು ಎಲ್ಲರೂ ಪೊಲೀಸ್ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಿರಿ. ಪರಿಸರಕ್ಕೆ ಹಾನಿಯಾಗದಂತೆ ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಯಾವುದೇ ವಿಘ್ನಗಳು ಉಂಟಾಗದಂತೆ ಎಚ್ಚರವಹಿಸಿ ಎಂದು ಕರೆ ನೀಡಿದರು.
ಸಭೆಯಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್, ಅಪರಾಧ ಉಪನಿರೀಕ್ಷಕ ಸ್ವಾಮಿ, ಪಿಎಸ್‌ಐ ಮೋಹನ್‌ರಾಜ್ ಇತರರಿದ್ದರು.