ಬಳ್ಳಾರಿ : ಜಿಲ್ಲಾಡಳಿತದಿಂದ ದೇವರ ದಾಸಿಮಯ್ಯ ಮತ್ತು ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಎಡಿಸಿ ಮಹಮ್ಮದ್ ಎನ್.ಜುಬೇರ್ ಹೇಳಿದರು.
ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಮಹನೀಯರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಏ.02 ರಂದು ದೇವರ ದಾಸಿಮಯ್ಯ ಜಯಂತಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಸಮುಚ್ಛಯ ಸಭಾಂಗಣದಲ್ಲಿ ಮತ್ತು ಏ.10 ರಂದು ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮವನ್ನು ನಗರದ ತೇರುಬೀದಿ ರಸ್ತೆಯ ಮಹಾವೀರ ಜೈನರ ದೇವಸ್ಥಾನದ ಹಾಲ್‌ನಲ್ಲಿ ಅರ್ಥಪೂರ್ಣ ಆಚರಣೆಗೆ ಕ್ರಮ ವಹಿಸಲಾಗುವುದು ಎಂದರು.
ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಅಂಗವಾಗಿ ಮೆರವಣಿಗೆಯು ದೇವಸ್ಥಾನದಿಂದ ಬೆಂಗಳೂರು ರಸ್ತೆ-ಬ್ರಾಹ್ಮೀಣ ಸ್ಟ್ರೀಟ್ -ಕಾಳಮ್ಮ ಬಜಾರ್ ನಿಂದ ಮರಳಿ ದೇವಸ್ಥಾನದ ವರೆಗೆ ನಡೆಯಲಿದ್ದು, ರಸ್ತೆ ಸಂಚಾರ ಮಾರ್ಗಕ್ಕೆ ವ್ಯವಸ್ಥೆ ಮಾಡಬೇಕು.
ಜಯಂತಿ ಆಚರಣೆ ಸಂದರ್ಭದಲ್ಲಿ ಶಿಷ್ಠಾಚಾರ ಪಾಲನೆ, ಆಹ್ವಾನ ಪತ್ರಿಕೆ, ವಿಶೇಷ ಉಪನ್ಯಾಸ, ವಚನ ಗಾಯನ ಸೇರಿದಂತೆ ಎಲ್ಲವೂ ಸರಿಯಾಗಿ ನಿರ್ವಹಿಸಬೇಕು. ಅದೇ ರೀತಿ ವೇದಿಕೆ, ಕುಡಿಯುವ ನೀರು, ಸ್ವಚ್ಛತೆ ಕಾರ್ಯ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಮಹನೀಯರ ವಿಚಾರಧಾರೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ನುರಿತ ಉಪನ್ಯಾಸಕರಿಂದ ವಿಶೇಷ ಉಪನ್ಯಾಸ ಆಯೋಜಿಸಲಾಗುವುದು. ಜಯಂತಿ ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಲಾತಂಡಗಳನ್ನು ನಿಯೋಜಿಸಲಾಗುವುದು. ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ತಪ್ಪದೇ ಹಾಜರಿರಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸೂಚಿಸಿದರು.
ಸಭೆಯಲ್ಲಿ ವಿವಿಧ ಸಮುದಾಯದ ಮುಖಂಡರು, ಜನ ಪ್ರತಿನಿಧಿಗಳು ಜಯಂತಿಗಳ ಆಚರಣೆಯ ಕುರಿತು ತಮ್ಮ ಸಲಹೆ-ಸೂಚನೆ ನೀಡಿದರು.