

ರಬಕವಿ-ಬನಹಟ್ಟಿ: ಆತ್ಮವಿಶ್ವಾಸ, ಅತ್ಯುತ್ಸಾಹ, ಕುತೂಹಲ, ಅನ್ವೇಷಣಾಬುದ್ಧಿ ಇವುಗಳ ಅತ್ಯುನ್ನತ ಸಂಗಮವೇ ವಿದ್ಯಾರ್ಥಿ ಜೀವನ. ವಿದ್ಯಾರ್ಥಿಗಳು ಈ ಜೀವನವನ್ನು ಸಂಭ್ರಮಿಸುವುದರ ಜತೆಗೆ ಸಾಧನೆಯ ಮೂಲಕ ಸಮಾಜಕ್ಕೆ ನಿಮ್ಮ ಅನಿವಾರ್ಯತೆ ಸೃಷ್ಟಿಸಿಬೇಕಿದೆ ಎಂದು ಹಿರಿಯ ಸಾಹಿತಿ ಡಾ. ಶಾರದಾ ಮುಳ್ಳೂರ ತಿಳಿಸಿದರು.
ರಬಕವಿ ಬನಹಟ್ಟಿ ನಗರಸಭೆ ವ್ಯಾಪ್ತಿಯ ರಾಂಪುರ ನಗರದ ಎಂಪಿ ಬಿಳ್ಳೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಾರ್ಷಿಕೋತ್ಸವ ಹಾಗೂ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಸೃಜನಶೀಲತೆ, ಕ್ರಿಯಾಶೀಲತೆ, ಪ್ರತಿಭೆ, ನಿರಂತರ ಪ್ರಯತ್ನ ವಿದ್ಯಾರ್ಥಿಗಳ ಲಕ್ಷಣಗಳಾಗಿವೆ. ಇಂದಿನ ಜಗತ್ತಿನಲ್ಲಿ ನಾವು ಪ್ರಕಾಶಮಾನವಾಗಿ ಬೆಳಗಬೇಕಾದರೆ ಕಷ್ಟಪಟ್ಟು ಓದದೇ ಇಷ್ಟಪಟ್ಟು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಕನ್ನಡ ಶಿಕ್ಷಕಿ ಗೀತಾ ಕೀರಪೂರ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಕರ ಉತ್ತಮ ಗುಣಗಳನ್ನು ಮಕ್ಕಳು ಅಳವಡಿಸಿಕೊಳ್ಳುವ ಮೂಲಕ ತಮ್ಮ ಗುರಿ ಸಾಧನೆಯೆಡೆಗೆ ಹೆಜ್ಜೆ ಹಾಕಬೇಕು ಎಂದರು.
ಶಿಕ್ಷಕ ಶ್ರೀಶೈಲ ಬುರ್ಲಿ ವಾರ್ಷಿಕ ವರದಿ ವಾಚಿಸಿದರು. ಮುಖ್ಯ ಶಿಕ್ಷಕ ಮಹೇಶ ಘಾಟಗೆ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ ಶಿರಹಟ್ಟಿ ಉದ್ಘಾಟಿಸಿದರು.
ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಸಾಧಕರನ್ನು ಹಾಗೂ ಕ್ರೀಡಾ ಸಾಧಕರನ್ನು ಸನ್ಮಾನಿಸಲಾಯಿತು. ರಾಜ್ಯಮಟ್ಟದ ಪ್ರಶಸ್ತಿ ವಿಜೇತ ಶಿಕ್ಷಕ ಬಿ.ಡಿ. ನೇಮಗೌಡ, ನಿಯೋಜಿತ ಶಿಕ್ಷಕ ನಜೀರ್ ಅಹ್ಮದ್ ಅವರನ್ನು ಸತ್ಕರಿಸಲಾಯಿತು.
ಉಪಾಧ್ಯಕ್ಷೆ ರೇಖಾ ಸೋನೊನಿ, ರೇವಣಸಿದ್ಧ ಮುಗುಳಖೋಡ, ಡಿ.ಎಲ್. ದಾನವಾಡಕರ, ಪ್ರಕಾಶ ಸಿಂಗನ್, ಅಶೋಕ ಸೋನೋನೆ, ಮಂಗಲಾ ಬಕರೆ, ನಂದಾ ಅರಳಿಕಟ್ಟಿ ಮತ್ತಿತರರಿದ್ದರು. ಎ.ಎ. ಮೋಮಿನ್ ನಿರೂಪಿಸಿದರು. ಅಪ್ಪಾಸಾಬ ತುಬಚಿ ಸ್ವಾಗತಿಸಿದರು, ಪರಶುರಾಮ ಜಮಾದಾರ ವಂದಿಸಿದರು.