

ವಿಜಯವಾಣಿ ಸುದ್ದಿಜಾಲ ಬಾದಾಮಿ
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭೋತ್ಸವವನ್ನು ಹಬ್ಬದಂತೆ ಆಚರಣೆ ಮಾಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಮೇಲ್ವಿಚಾರಣಾಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಚಾಲುಕ್ಯನಗರದ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಮೇಲ್ವಿಚಾರಣಾಧಿಕಾರಿಗಳಿಗೆ ಶಾಲಾ ಪ್ರಾರಂಭೋತ್ಸವದ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮೇ 29 ಮತ್ತು 30 ರಂದು ಎರಡು ದಿನ ಅಗತ್ಯ ಪೂರ್ವ ಸಿದ್ಧತೆ, ಕೊಠಡಿ ಸ್ವಚ್ಛತೆ, ಆಡಳಿತಾತ್ಮಕ ಕಾರ್ಯ ಹಂಚಿಕೆ, ಎಸ್‌ಡಿಎಂಸಿ ಸಭೆ, ವೇಳಾಪಟ್ಟಿ, ವಾರ್ಷಿಕ ಕ್ರಿಯಾ ಯೋಜನೆ, ಶಾಲಾ ಪಂಚಾಂಗ ತಯಾರಿಕೆ, ಶಾಲಾ ಪ್ರಾರಂಭೋತ್ಸವದ ಕುರಿತು ಜಾಗೃತಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಮೇ 31ರಂದು ಶಾಲೆಗೆ ಮಕ್ಕಳು ಮೊದಲ ದಿನ ಹಾಜರಾಗುತ್ತಿದ್ದು, ತಳಿರು ತೋರಣಗಳಿಂದ, ರಂಗೋಲಿ ಬಿಡಿಸುವ ಮೂಲಕ ಅಂದು ಸ್ಥಳೀಯ ಜನಪ್ರತಿನಿಧಿಗಳು, ಎಸ್‌ಡಿಎಂಸಿ ಪದಾಧಿಕಾರಿಗಳ ಸಮ್ಮುಖದಲ್ಲಿ ಶಾಲಾ ಪಠ್ಯಪುಸ್ತಕ ವಿತರಿಸುವ ಮೂಲಕ ಸಿಹಿ ವಿತರಿಸಬೇಕು ಎಂದರು.
ಎಲ್ಲ ಮೇಲ್ವಿಚಾರಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳ ಮುಖ್ಯಶಿಕ್ಷಕರ ಸಭೆ ಕರೆದು ಇಲಾಖೆ ಮಾರ್ಗಸೂಚಿಗಳಂತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಿಸಲು ಕ್ರಮ ವಹಿಸಬೇಕು. ತಂಡ ರಚಿಸಿ ಮಿಂಚಿನ ಸಂಚಾರ ಮೂಲಕ ಪರಿಶೀಲಿಸಲಾಗುವುದು. ಶಾಲೆ ಮಕ್ಕಳ ಆಧಾರ್ ವೆಲಿಡೇಷನ್ ಮಾಡಿಸಬೇಕು. ಈಗಾಗಲೇ ಪಠ್ಯಪುಸ್ತಕಗಳನ್ನು ಎಲ್ಲ ಶಾಲೆಗಳಿಗೆ ತಲುಪಿಸಲಾಗಿದ್ದು, ಅವುಗಳನ್ನು ಮಕ್ಕಳಿಗೆ ಮುಟ್ಟಿಸಬೇಕು. ತಾಲೂಕಿನಲ್ಲಿ ವ್ಯಾಪಕ ಕಟ್ಟುನಿಟ್ಟಿನ ಕ್ರಮ ಮತ್ತು ನಕಲುಮುಕ್ತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿ ಜಿಲ್ಲೆಗೆ ಎರಡನೇ ಸ್ಥಾನ ಪಡೆಯಲಾಗಿದೆ. ಕಡಿಮೆ ಲಿತಾಂಶ ಬಂದ ಶಾಲೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಹಾಗೂ ಪ್ರಭಾರ ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಎಂ.ಬಿ. ದೊಡ್ಡಪ್ಪನ್ನವರ ಮಾತನಾಡಿ, ಶಾಲಾ ಪ್ರಾರಂಭೋತ್ಸವದಂದು ಬಿಸಿಯೂಟ ರೇಷನ್ ಕೊರತೆಯಾದರೆ ಪಕ್ಕದ ಶಾಲೆಯಿಂದ ಪಡೆದು ಅಡುಗೆ ಮಾಡಬೇಕು. ಸಿಹಿ ಊಟ ಬಡಿಸಬೇಕು. ಬಿಸಿಯೂಟ ಸಿಬ್ಬಂದಿ ಮೇ 29 ರಿಂದ ಕೆಲಸಕ್ಕೆ ಹಾಜರಾಗಬೇಕು. ಈ ಬಾರಿ ಮಳೆಗಾಲ ಆರಂಭವಾಗುತ್ತಿರುವುದರಿಂದ ಮಕ್ಕಳನ್ನು ಸುರಕ್ಷಿತ ಕೊಠಡಿಯಲ್ಲಿ ಕೂಡಿಸಬೇಕು. ಲಿಂಕ್ ಡಾಕ್ಯುಮೆಂಟ್ ಯೋಜನೆಯಡಿ ಜೂನ್ 18 ರಂದು ಅನಕ್ಷರಸ್ಥರಿಗೆ 20 ಗ್ರಾಪಂಗಳಲ್ಲಿ ಪರೀಕ್ಷೆ ನಡೆಯಲಿದ್ದು, ಸಂಬಂಧಿಸಿದವರು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವೈ. ಕಂದಗನೂರ, ಬಸವರಾಜ ಹಳಗೇರಿ, ಶಿಕ್ಷಣ ಸಂಯೋಜಕ ಹನುಮಂತರಾಜು, ಎಂ.ಸಿ.ನಾಲತವಾಡ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಎಂ.ಎ. ಹದ್ಲಿ, ಜಾವೀದ್ ಶೇಖ್ ಇತರರಿದ್ದರು.