

ಹೊಸಪೇಟೆ: ರಾಷ್ಟ್ರೀಯ ಹಬ್ಬಗಳಲ್ಲಿ ಪ್ರಮುಖವಾದ ಸ್ವಾತಂತ್ರ್ಯ ದಿನವನ್ನು ಜಿಲ್ಲಾ ಮಟ್ಟದಲ್ಲಿ ಅಚ್ಚುಕಟ್ಟಾಗಿ ಆಚರಿಸಲು ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವಾಕರ ಎಂ.ಎಸ್. ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹಬ್ಬಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಧ್ವಜಾರೋಹಣದ ದಿನ ಮುಖ್ಯ ಅತಿಥಿಗಳಿಗೆ ಆಹ್ವಾನ ಸೇರಿದಂತೆ ನಿಗದಿತ ಸಮಯದಲ್ಲಿ ಧ್ವಜಾರೋಹಣ ಮತ್ತು ರಾಷ್ಟ್ರಗೀತೆ ಜತೆಗೆ ಪರೇಡ್ ವೀಕ್ಷಣೆ, ಗೌರವ ಸ್ವೀಕಾರ, ಪಥ ಸಂಚಲನ ಹಾಗೂ ಸ್ವಾತಂತ್ರ್ಯೋತ್ಸವ ಸಂದೇಶ ಪ್ರಕ್ರಿಯೆಗಳು ಶಿಷ್ಟಾಚಾರ ಪ್ರಕಾರ ನಿರ್ವಹಿಸುವಂತೆ ಆದೇಶಿಸಿದರು.
ಪ್ರಥಮ ಚಿಕಿತ್ಸೆ ನಿರ್ವಹಣೆ, ಸೂಕ್ತ ಪೊಲೀಸ್ ಬಂದೋಬಸ್ತ್, ಸನ್ಮಾನ ಕಾರ್ಯಕ್ರಮ, ಐತಿಹಾಸಿಕ ಮತ್ತು ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಯೋಜನಾ ಕ್ರಮಗಳನ್ನು ಇಲಾಖಾವಾರು ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು. ಉಪವಿಭಾಗಾಧಿಕಾರಿ ನೋಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.