

ಬಸವನಬಾಗೇವಾಡಿ: ನಶಿಸಿ ಹೋಗುತ್ತಿರುವ ಜಾನಪದ ಕಲೆ ಉಳಿಸಿ ಬೆಳೆಸಲು ಬಸವೇಶ್ವರ ಸಮಿತಿ ಹಮ್ಮಿಕೊಂಡ ಹಲಗೆ ಬಾರಿಸುವ ಸ್ಪರ್ಧೆ ಪ್ರೋತ್ಸಾಹಿಸುತ್ತಿದೆ ಎಂದು ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ ಹೇಳಿದರು.
ಪಟ್ಟಣದ ಹಳೇ ಸಂತೆ ಕಟ್ಟಿ ಆವರಣದಲ್ಲಿ ಬಸವೇಶ್ವರ ಸೇವಾ ಸಮಿತಿ ಹೋಳಿ ಹಬ್ಬದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಹಲಿಗೆ ಬಾರಿಸುವ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.
ಹಿಂದೆ ರಾಶಿ ಮಾಡುವ ಸಂದರ್ಭದಲ್ಲಿ ಹಂತಿ ಪದ ಹಾಡಲಾಗುತ್ತಿತ್ತು. ಜಾನಪದ ಹಾಡುಗಳು ನಮ್ಮ ವ್ಯಕ್ತಿತ್ವ ರೂಪಿಸಲು ಪೂರಕವಾಗುವ ಜತೆಗೆ ಮನರಂಜನೆ ನೀಡುತ್ತವೆ. ಕೆಟ್ಟ ಗುಣಗಳನ್ನು ಸುಟ್ಟು ಒಳ್ಳೆಯ ಗುಣಗಳನ್ನು ಬೆಳೆಸಬೇಕೆಂಬ ನಂಬಿಕೆಯಿಂದ ನಮ್ಮ ಪೂರ್ವಜರು ಹೊಳಿ ಹಬ್ಬ ಆಚರಿಸುತ್ತಿದ್ದರು. ಪ್ರತಿಯೊಬ್ಬರಲ್ಲಿ ಸಮಾನತೆಯ ಸಂದೇಶ ಸಾರುವ ಹಬ್ಬ ಹೊಳಿ ಹಬ್ಬವಾಗಿದೆ. ಆದ್ದರಿಂದ ಪ್ರತಿಯೊಬರೂ ಹೋಳಿ ಹಬ್ಬವನ್ನು ಆಚರಿಸುವ ಮೂಲಕ ನಮ್ಮ ಸಂಸ್ಕೃತಿ ಉಳಿಸಬೇಕು ಎಂದರು.
ಡಿವೈಎಸ್‌ಪಿ ಬಲ್ಲಪ್ಪ ನಂದಗಾವಿ ಮಾತನಾಡಿ, ಪರಂಪರೆ ಉಳಿಸುವ ನಿಟ್ಟಿನಲ್ಲಿ ಹಲಗೆ ಹಬ್ಬ ಆಯೋಜಿಸಿರುವುದು ಸ್ವಾಗತಾರ್ಹ ಎಂದರಲ್ಲದೆ, ಪ್ರತಿಯೊಬ್ಬರೂ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದರು.
ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಇದೇ ಮೊದಲ ಬಾರಿಗೆ ಸೇವಾ ಸಮಿತಿಯಿಂದ ಹಲಗೆ ಬಾರಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಯಶಸ್ಸಿಗೆ ಎಲ್ಲರ ಸಹಾಯ ಸಹಕಾರ ಮುಖ್ಯವಾಗಿದೆ ಎಂದರು.
ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಸವರಾಜ ಹಾರಿವಾಳ, ಲೋಕನಾಥ ಅಗರವಾಲ, ರಮೇಶ ಯಳಮೇಲಿ, ಶೇಖರ ಗೊಳಸಂಗಿ, ಮಹಾಂತೇಶ ಆದಿಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗಮೇಶ ಓಲೇಕಾರ ಸ್ವಾಗತಿಸಿದರು. ರವಿ ರಾಠೋಡ ನಿರೂಪಿಸಿ, ವಂದಿಸಿದರು.
ವಿಜೇತರು: ವೈಯಕ್ತಿಕ ಹಲಗೆ ಬಾರಿಸುವ ಸ್ಪರ್ಧೆಯಲ್ಲಿ ಮಡಿವಾಳ ಕೋರವಾರ (ಪ್ರಥಮ), ನಿಜಪ್ಪ ಜಾಲವಾದಿ(ದಿತೀಯ), ಹಣಮಂತ ಮಾದರ(ತೃತೀಯ), ಗ್ರುಪ್ ವಿಭಾಗದಲ್ಲಿ ಮಹಾಂತೇಶ ಕೊಂಡಗೂಳಿ ತಂಡ (ಪ್ರಥಮ), ಚನ್ನಬಸವ ನಗರದ ಮಲ್ಲು ಕಲ್ಯಾಣಿ ತಂಡ(ದ್ವೀತಿಯ), ರಾಜು ತಾಳಿಕೋಟಿ ತಂಡ ತೃತೀಯ ಸ್ಥಾನ ಪಡೆದು ನಗದು ಬಹುಮಾನ ಪಡೆದರು.