

ನರಗುಂದ: ಹಿಂದು- ಮುಸ್ಲಿಮರು ಹೋಳಿ ಹಾಗೂ ರಂಜಾನ್ ಹಬ್ಬವನ್ನು ಸೌಹಾರ್ದದಿಂದ ಆಚರಿಸಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು ಎಂದು ಸಿಪಿಐ ಮಂಜುನಾಥ ನಡುವಿನಮನಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ಕರೆದಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಟಯರ್, ನಿಷೇಧಿತ ಪ್ಲಾಸ್ಟಿಕ್ ವಸ್ತು ಹಾಗೂ ಸಾಮಗ್ರಿ ಸುಡಬಾರದು. ಬಣ್ಣದಾಟಕ್ಕೆ ನೈಸರ್ಗಿಕ ಬಣ್ಣಗಳನ್ನು ಬಳಸಬೇಕು. ಮಹಿಳೆಯರಿಗೆ ಅವಮಾನಕರವಾಗುವ ಅವಾಚ್ಯ ಸಂಗೀತ ಪದಗಳನ್ನು ಹಾಡಬಾರದು. ಬಣ್ಣ ಎರಚುವ ನೆಪದಲ್ಲಿ ಯುವಕರು ಗುಂಪುಗುಂಪಾಗಿ ಜಗಳ ಮಾಡುವುದು ಕಂಡು ಬಂದಲ್ಲಿ ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಶಿವಾನಂದ ಮುತವಾಡ, ಅಂಜುಮನ್ ಎ-ಇಸ್ಲಾಂ ಸಂಸ್ಥೆ ಅಧ್ಯಕ್ಷ ಐ.ಪಿ. ಚಂದೂನವರ, ಹನುಮಂತ ಹವಾಲ್ದಾರ, ಮಹೇಶ ಹಟ್ಟಿ, ಪ್ರಕಾಶ ಹಾದಿಮನಿ, ದಿವಾನಸಾಬ್ ಕಿಲ್ಲೇದಾರ, ಶಂಕರ ಸುರೇಬಾನ್, ಬಾಬುಸಾಬ ಅತ್ತಾರ, ಶಿವಪ್ಪ ಬೋಳಶೆಟ್ಟಿ, ಪಾಂಡು ಗಾಯಕವಾಡ, ವಿನಾಯಕ ಮಾನೆ, ಬುಡ್ನೇಸಾಬ್ ಮಟಗೇರ, ಪವಾಡೆಪ್ಪ ವಡ್ಡಿಗೇರಿ, ಅಭಿಷೇಕ ಮಾನೆ, ಅಬ್ದುಲ್‌ಸಾಬ್ ಮುಲ್ಲಾ, ಇತರರಿದ್ದರು.