

ಮಡಿಕೇರಿ: ಪರಿಸರ ಸ್ನೇಹಿಯಾಗಿ ಗೌರಿ-ಗಣೇಶ ಹಬ್ಬ ಆಚರಿಸುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಪ್ರಸಕ್ತ ಸಾಲಿನ ಗೌರಿ-ಗಣೇಶ ಹಬ್ಬವನ್ನು ರಾಜ್ಯದಲ್ಲಿ ಗೌರಿ ಹಾಗು ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿ ಕೆರೆ/ಬಾವಿ ಹಾಗೂ ಇನ್ನಿತರೆ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸುವುದು ಸಂಪ್ರದಾಯವಾಗಿದೆ. ಇದರಿಂದ ಜಲಮೂಲಗಳು ಕಲುಷಿತಗೊಂಡು ಪರಿಸರಕ್ಕೆ ಹಾಗೂ ಸಾರ್ವಜನಿಕರ ಆರೋಗ್ಯಕ್ಕೆ ತೊಂದರೆ ಉಂಟಾಗುವುದರಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನೈಸರ್ಗಿಕ ಜಲಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತ ಗೌರಿ ಹಾಗೂ ಗಣೇಶನ ವಿಗ್ರಹಗಳನ್ನು ರಾಜ್ಯದ ಕೆರೆ, ನದಿ, ಕಾಲುವೆ, ಬಾವಿ ಹಾಗೂ ಇತರೆ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಶಬ್ದ ಮಾಲಿನ್ಯ(ನಿರ್ಬಂಧ ಮತ್ತು ನಿಯಂತ್ರಣ)ನಿಯಮಗಳು ೨೦೦೦ ರ ನಿಬಂಧನೆಗಳನ್ನು ಗಣೇಶ ಪೆಂಡಾಲ್‌ಗಳಲ್ಲಿ ಅನುಸರಿಸಬೇಕು. ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಗಣೇಶ ಪೆಂಡಾಲ್‌ಗಳನ್ನು ನಿರ್ಮಿಸುವಲ್ಲಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವುದು ಹಾಗೂ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದೆಂದು ತಿಳಿಸಲಾಗಿದೆ. ರಾಜ್ಯದಲ್ಲಿ ನಿಷೇಧಿಸಲಾದ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ಯಾವುದೇ ಕಾರಣಕ್ಕೂ ಬಳಸದೇ ಇರುವುದು ಮತ್ತು ಬಳಸಿದ್ದಲ್ಲಿ ಸೂಕ್ತ ದಂಡವನ್ನು ಸ್ಥಳೀಯ ಸಂಸ್ಥಗಳ ಮೂಲಕ ವಿಧಿಸಲಾಗುವುದು. ಎಲ್ಲಾ ರೀತಿಯ ಪ್ಲಾಸ್ಟಿಕ್ ಕ್ಯಾರಿ ಬ್ಯಾಗುಗಳು ಬಳಸಬಾರದು. ಬಳಸಿದ್ದಲ್ಲಿ ಸೂಕ್ತ ದಂಡವನ್ನು ಸ್ಥಳೀಯ ಸಂಸ್ಥೆಗಳ ಮೂಲಕ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.