ಗಣೇಶೋತ್ಸವ ಅರ್ಥಪೂರ್ಣ ಆಚರಣೆಗೆ ಸಲಹೆ

Celebrate Ganeshotsava meaningfully
Published on

ಡಿವೈಎಸ್ಪಿ ರುದ್ರಪ್ಪ ಉಜ್ಜನಕೊಪ್ಪ ಹೇಳಿಕೆ I ಹೊನ್ನಾಳಿಯಲ್ಲಿ ನಾಗರಿಕ ಸೌಹಾರ್ದ ಸಭೆ

ಹೊನ್ನಾಳಿ: ಪ್ರಸಕ್ತ ದಿನಗಳಲ್ಲಿ ಗೌರಿ ಗಣೇಶ ಉತ್ಸವ ಯುವಕರಿಗೆ ಸೀಮಿತ ಎನ್ನುವಂತಾಗಿದ್ದು, ಈ ಹಬ್ಬವನ್ನು ಎಲ್ಲರೂ ಸೇರಿ ಆಚರಿಸುವಂತಾಗಬೇಕು ಎಂದು ಚನ್ನಗಿರಿ ಉಪವಿಭಾಗದ ಡಿವೈಎಸ್ಪಿ ರುದ್ರಪ್ಪ ಉಜ್ಜನಕೊಪ್ಪ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಗುರುವಾರ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ನಾಗರಿಕ ಸೌಹಾರ್ದ ಸಭೆಯಲ್ಲಿ ಮಾತನಾಡಿದರು.

ಕರ್ಕಶ ಧ್ವನಿ ಮಾಡುವ ಡಿಜೆ ಮತ್ತಿತರ ಅಸಭ್ಯ ನರ್ತನ ಮಾಡುತ್ತ ಗಣೇಶನ ಹಬ್ಬವನ್ನು ಅನರ್ಥಗೊಳಿಸಬಾರದು. ಅದರ ಬದಲು ರಾಜ್ಯದಲ್ಲಿ ಅನೇಕ ಕಲಾತಂಡಗಳು, ಜಾನಪದ ಕಲಾವಿದರು, ಸಾಹಿತಿಗಳು, ಸಂಗೀತಗಾರರ ದಂಡೇ ಇದೆ. ಇಂಥವರನ್ನು ಕರೆಸಿ ಕಾರ್ಯಕ್ರಮ ಆಯೋಜಿಸಿದರೆ ಸಾರ್ಥಕ ಮತ್ತು ಹಬ್ಬಕ್ಕೂ ಕಳೆ ಬರುತ್ತದೆ. ಸರ್ಕಾರದ ಮಾರ್ಗಸೂಚಿಗಳಂತೆ ಹಬ್ಬ ಆಚರಿಸಿದರೆ ಎಲ್ಲರಿಗೂ ಕ್ಷೇಮ ಎಂದು ಸಲಹೆ ನೀಡಿದರು.

ತಹಸೀಲ್ದಾರ್ ಪಟ್ಟರಾಜೇಗೌಡ ಮಾತನಾಡಿ, ಯಾವುದೇ ಧಾರ್ಮಿಕ ಆಚರಣೆಗಳ ಉದ್ದೇಶ ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಗಳೊಂದಿಗೆ ಜೀವನ ನಡೆಸುದಾಗಿದೆ. ತಾಲೂಕು ಆಡಳಿತ, ಪುರಸಭೆ, ಬೆಸ್ಕಾಂ ಹಾಗೂ ಪೊಲೀಸ್ ಇಲಾಖೆಗಳ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿ ಸುರಕ್ಷಿತ ಮತ್ತು ಸಂಭ್ರಮದ ಹಬ್ಬ ಆಚರಿಸೋಣ ಎಂದು ಹೇಳಿದರು.

ಬೆಸ್ಕಾಂ ಎಇಇ ಜಯಪ್ಪ ಮಾತನಾಡಿ, ಗಣೇಶ ಹಬ್ಬ ಆಚರಿಸುವ ಸಮಿತಿಗಳು ಅಧಿಕೃತವಾಗಿ ಪೂರ್ವಾನುಮತಿ ಪಡೆದು ಅಧಿಕೃತ ವಿದ್ಯುತ್ ಕೆಲಸಗಾರರ ಮೂಲಕ ಪೆಂಡಾಲ್‌ಗಳ ವಿದ್ಯುತ್ ಅಲಂಕಾರ ಮುಂತಾದ ಕೆಲಸ ಮಾಡಿಸಿಕೊಳ್ಳಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ ಮಾತನಾಡಿ, ಪಿಒಪಿ ಗಣೇಶ ಮೂರ್ತಿ ನಿಷೇಧಿಸಲಾಗಿದೆ. ಪುರಸಭೆ ನಿಗದಿಪಡಿಸಿದ ಸ್ಥಳಗಳಲ್ಲಿ ಗಣಪತಿ ಮೂರ್ತಿ ವಿಸರ್ಜನೆ ಮಾಡಬೇಕು ಎಂದು ಹೇಳಿದರು.

ಪೊಲೀಸ್ ಇನ್ಸ್‌ಪೆಕ್ಟರ್ ಸುನಿಲ್‌ಕುಮಾರ್ ಮಾತನಾಡಿ, ಗಣೇಶ ಮೂರ್ತಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸುವ ಸಮಿತಿಯವರು ಅನುಮತಿ ಪಡೆಯಬೇಕು. ಇದಕ್ಕಾಗಿ ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಮುಖಂಡ ಎಂ.ಆರ್. ಮಹೇಶ್, ರಾಜು ಕಣಗಣ್ಣಾರ, ದಿಡಗೂರು ತಮ್ಮಣ್ಣ, ಸೂರಟೂರು ಹನುಮಂತಪ್ಪ, ಮಕ್ಬುಲ್ ಆಹಮ್ಮದ್ ವಿನಯ್ ವಗ್ಗರ್ ಮಾತನಾಡಿದರು. ಪೇದೆಗಳಾದ ಜಗದೀಶ್, ಬಸವರಾಜು, ಶಾಂತರಾಜು, ನಾಗನಗೌಡ, ಮಂಜುನಾಥ್, ನೀಲಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net