ಶಾಂತಿಯುತವಾಗಿ ಗಣೇಶೊತ್ಸವ ಆಚರಿಸಿ

nrp 1... (2)
Published on

ಎನ್.ಆರ್.ಪುರ: ಈ ಬಾರಿ ಅದ್ಧೂರಿಯಾಗಿ ಹಾಗೂ ಶಾಂತಿಯುತವಾಗಿ ಗಣೇಶೊತ್ಸವ ಆಚರಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ಡಾ.ನೂರುಲ್ ಹುದಾ ಹೇಳಿದರು.

ತಾಪಂ ಸಾಮರ್ಥ್ಯ ಸೌಧದಲ್ಲಿ ನಡೆದ ಗಣೇಶೋತ್ಸವ ಹಾಗೂ ಈದ್‌ಮಿಲಾದ್ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿ, ರಸ್ತೆ ಬದಿಯಲ್ಲಿ ಗಣಪತಿ ಪ್ರತಿಷ್ಠಾಪಿಸಬೇಡಿ ಇದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗಲಿದೆ. ಕೇವಲ ಇಲಾಖೆ ಮಾತ್ರವಲ್ಲ ಎಲ್ಲರ ಸಹಕಾರದಿಂದ ಮಾತ್ರ ಯಾವುದೇ ಹಬ್ಬಗಳು, ಆಚರಣೆಗಳು, ಮೆರವಣಿಗೆಗಳು ಅದ್ಧೂರಿಯಾಗಿ ನಡೆಸಲು ಸಾಧ್ಯ ಎಂದರು.

ಸಿಪಿಐ ಗುರುದತ್ ಕಾಮತ್ ಮಾತನಾಡಿ, ವಿದ್ಯುತ್ ತಂತಿಗಳು ಹಾದು ಹೋಗಿರುವ ಕಡೆ ಗಣಪತಿ ಪ್ರತಿಷ್ಠಾಪನೆ ಮಾಡಬೇಡಿ. ಗಣಪತಿ ವಿಸರ್ಜನೆ ಮೆರವಣಿಗೆ ಕಳೆದ ಸಾರಿ ನಡೆಸಿದ ಮಾರ್ಗದಲ್ಲೇ ಸಾಗಬೇಕು. ಕ್ಷುಲ್ಲಕ ಕಾರಣಕ್ಕೆ ಬದಲಾವಣೆ ಅಸಾಧ್ಯ. ಗಣಪತಿ ಪ್ರತಿಷ್ಠಾಪಿಸಿರುವ ಜಾಗದಲ್ಲಿ ದಿನದ 24 ತಾಸು ಸಂಘದ ಪದಾಧಿಕಾರಿಗಳು ಕಡ್ಡಾಯವಾಗಿ ಇರಬೇಕು. ಅಗ್ನಿ ನಿಂದಿಸುವ ಪರಿಕರಗಳು ಸಿದ್ಧವಾಗಿಟ್ಟುಕೊಳ್ಳಬೇಕು. ಯಾವುದೇ ಧರ್ಮ, ಜಾತಿಗೆ ಅಗೌರವ ತೋರುವ ಬ್ಯಾನರ್ ಅಥವಾ ಪೋಸ್ಟರ್‌ಗಳನ್ನು ಹಾಕುವಂತಿಲ್ಲ. ಬ್ಯಾನರ್ ಮಾಡಿಸುವ ಮೊದಲು ಇಲಾಖೆಗೆ ಅದರ ಕರುಡು ಪ್ರತಿ ನೀಡಿ ಅನುಮೋದನೆ ಪಡೆಯುವುದು ಕಡ್ಡಾಯ ಎಂದರು.

ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಕ್ರೈಂ ವಿಭಾಗದ ಪಿಎಸ್‌ಐ ಜ್ಯೋತಿ, ತಾಪಂ ನರೇಗಾ ಸಹಾಯಕ ನಿರ್ದೇಶಕ ಎನ್.ಎಲ್.ಮನೀಶ ಹಾಗೂ ತಾಲೂಕಿನ ವಿವಿಧ ಗಣೇಶೋತ್ಸವ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net