

ಗುಳೇದಗುಡ್ಡ: ಹೋಳಿ ಹಾಗೂ ರಂಜಾನ್ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಬೇಕು. ಯಾರಾದರೂ ಶಾಂತಿ ಕದಡುವ ಯತ್ನ ಮಾಡಿದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ. ಅದಕ್ಕೆ ಅವಕಾಶ ನೀಡಬೇಡಿ ಎಂದು ಹುನಗುಂದ ವಿಭಾಗದ ಡಿಎಸ್‌ಪಿ ವಿಶ್ವನಾಥರಾವ್ ಕುಲಕರ್ಣಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ಆಯೋಜಿಸಿದ್ದ ಹೋಳಿ ಹಾಗೂ ರಂಜಾನ್ ಹಬ್ಬದ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ಹೋಳಿ ಹಬ್ಬದಲ್ಲಿ ನೈಸರ್ಗಿಕ ಬಣ್ಣಗಳನ್ನು ಬಳಸಬೇಕು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಸಹಕರಿಸಬೇಕು ಎಂದರು.
ಸಿಪಿಐ ಕರಿಯಪ್ಪ ಬನ್ನೆ ಮಾತನಾಡಿ, ರಾತ್ರಿ 10 ಗಂಟೆ ನಂತರ ಹಲಗೆ ಬಾರಿಸಬೇಡಿ. ಅದರಿಂದ ಹಿರಿಯ ನಾಗರಿಕರ ನಿದ್ರೆಗೆ ಹಾಗೂ ವಿದ್ಯಾರ್ಥಿಗಳ ಓದಿಗೆ ತೊಂದರೆಯಾಗುತ್ತದೆ. ಕಿಡಗೇಡಿಗಳಿಂದ ಸಣ್ಣ ಪುಟ್ಟ ಘಟನೆಗಳು ನಡೆದರೆ ಹಿರಿಯರೇ ಬಗೆಹರಿಸಿಕೊಳ್ಳಿ. ಒಂದು ವೇಳೆ ನಿಮ್ಮ ಮಾತೂ ಕೇಳದಿದ್ದರೆ ನಮಗೆ ತಿಳಿಸಿ, ಅಂಥವರ ಮೇಲೆ ನಾವು ಸೂಕ್ರ ಕ್ರಮ ತೆಗೆದುಕೊಳ್ಳುತ್ತೇವೆ. ಹೋಳಿ ಮತ್ತು ರಂಜಾನ್ ಹಬ್ಬದಲ್ಲಿ ಇಲಾಖೆ ಸೂಕ್ತ ಬಂದೋಬಸ್ತ್ ನೀಡಲಿದೆ ಎಂದರು.
ಭುವನೇಶ ಪೂಜಾರ ಮಾತನಾಡಿ, ಮಾ.13ರಂದು ಕಾಮದಹನ, ಮಾ.14 ರಂದು ಬಣ್ಣದಾಟ ಆಯೋಜಿಸಲಾಗಿದೆ. ಕಾಮದಹನ, ಸೋಗಿನ ಮೆರವಣಿಗೆ, ಹೋಳಿ ಹಾಡು, ಹಲಗೆ ಹಬ್ಬ ಇತ್ಯಾದಿಗಳು ಜರುಗುತ್ತವೆ. ನಮ್ಮಲ್ಲಿ ಯಾವ ಅಹಿತಕರ ಘಟನೆ ಜರುಗದಂತೆ ನಾವೂ ನೋಡಿಕೊಳ್ಳುತ್ತೇವೆ ಎಂದರು.
ಎಎಸ್‌ಐ ಬಜಂತ್ರಿ, ಸಿದ್ದಣ್ಣವರ್, ಪ್ರಮುಖರಾದ ಸಿದ್ದಣ್ಣ ನಾಯನೇಗಲಿ, ಚಂದಪ್ಪ ಗೌಡರ, ಸಂಗಪ್ಪ ಆಲೂರ, ಚನ್ನಪ್ಪ ಮೇಟಿ, ಮಂಜುನಾಥ ವಾಲೀಕಾರ, ಯಲಗುರೇಶ ಅರಮನಿ, ಎಸ್.ಎಸ್.ಇಳಕಲ್, ಅಬ್ದುಲ್ ರಹೀಮಾನ್ ಯಳ್ಳಿಗುತ್ತಿ, ಲಾಳೆಸಾಬ ಮೋಮಿನ್, ಎಂ.ಎಚ್. ವಂದಾಲ್, ಮುತ್ತು ನಾಯಕ, ಮಹೇಶ ಸೂಳಿಭಾವಿ, ಶಿವು ಬಾದೋಡಗಿ, ಶಿವು ತುಪ್ಪದ ಮತ್ತಿತರರಿದ್ದರು.