ಕೇಕ್ ಬದಲು ಸಸಿ ನೆಟ್ಟು ಜನ್ಮದಿನ ಆಚರಿಸಿ

PARISARA JAGRUTI
Published on

ನರಗುಂದ: ಜನ್ಮದಿನ ಆಚರಿಸುವಾಗ ಕೇಕ್ ಕತ್ತರಿಸುವ ಬದಲು ಸಸಿ ನೆಟ್ಟು ಅದರ ಪಾಲನೆ, ಪೋಷಣೆ ಮಾಡಬೇಕು ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಯೋಗೇಶ ಎ. ಮನವಿ ಮಾಡಿದರು.

ತಾಲೂಕಿನ ವಾಸನ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಬುಧವಾರ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಸಸಿಗೆ ನೀರೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ವಾಸನ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ತಿಪ್ಪವ್ವ ಬಸನಗೌಡ ಪಾಟೀಲ ಮಾತನಾಡಿ, ಗ್ರಾಮದ ಸುತ್ತಲಿನ ಸಾರ್ವಜನಿಕ ಪ್ರದೇಶಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸಬೇಕು. ಶಾಲೆಯ ಸುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳಲು ಎಲ್ಲರೂ ಶ್ರಮಿಸಬೇಕು ಎಂದರು.

ಪರಿಸರ ಜಾಗೃತಿ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ, ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ವಿತರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಪ್ರೌಢ ಶಾಲೆ ಪ್ರಭಾರಿ ಮುಖ್ಯೋಪಾಧ್ಯಾಯ ಎನ್.ಎಸ್. ಪೂಜಾರ, ಮುಖ್ಯ ಅತಿಥಿಗಳಾಗಿ ಕ್ಷೇತ್ರ ಯೋಜನಾಧಿಕಾರಿ ಜಗದೀಶ ಬಿ., ತುಳಸಪ್ಪ ಶಿನಪ್ಪನವರ, ಟಿ.ಬಿ. ಸಕ್ರಪ್ಪನವರ, ರುಕ್ಮವ್ವ ತುಳಸಿಗೇರಿ, ಲಲಿತಾ ಪಾಟೀಲ, ಗುರುರಾಜ ಬೆಳಗಲಿ, ಕೃಷಿ ಮೇಲ್ವಿಚಾರಕ ಗುಡ್ಡಾಚಾರಿ ಬಡಿಗೇರ, ಕೊಣ್ಣೂರ ಪ್ಲಾಟ್ ಸೇವಾ ಪ್ರತಿನಿಧಿ ಸುನೀತಾ ಗಾಳಪ್ಪವರ ಹಾಗೂ ಸ್ವ ಸಹಾಯ ಮತ್ತು ಪ್ರಗತಿ ಬಂಧು ಸಂಘದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಶಾಲೆಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net