ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ

13MDK12
Published on

ಮಡಿಕೇರಿ:

ಬೆಳಗ್ಗೆ ೮ ಗಂಟೆಯಿಂದ ಮತ ಎಣಿಕೆ ಶುರುವಾದರೂ ೬ ಗಂಟೆಯಿಂದಲೇ ಮತ ಎಣಿಕೆ ಕೇಂದ್ರದ ಆವರಣದಲ್ಲಿ ಚಟುವಟಿಕೆ ಶುರುವಾಗಿತ್ತು. ಅಧಿಕಾರಿಗಳು, ಸಿಬ್ಬಂದಿ ಬೆಳಗ್ಗೆಯೇ ಆಗಮಿಸಿ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರು. ಕೇಂದ್ರ ಸುತ್ತಲೂ ಪೊಲೀಸರು ಜಮಾಯಿಸಿದ್ದರು. ಖಾಸಗಿ ವಾಹನಗಳನ್ನು ಮಧ್ಯದಲ್ಲೇ ತಡೆ ಹಿಡಿಯಲಾಗುತ್ತಿತ್ತು. ಪಾಸ್ ಇದ್ದವರನ್ನಷ್ಟೇ ಒಳಬಿಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಪೊಲೀಸ್ ಬಂದೋಬಸ್ಥ್ ವ್ಯವಸ್ಥೆ ಮಾಡಲಾಗಿತ್ತು.
ಎಣಿಕೆ ಕೇಂದ್ರದ ಪ್ರವೇಶ ದ್ವಾರದ ಬಳಿಯೇ ಮಾಧ್ಯಮ ಕೇಂದ್ರ ತೆರೆಯಲಾಗಿತ್ತು. ಮಾಹಿತಿ ನೀಡುವಲ್ಲಿ ಆರಂಭದಲ್ಲಿ ಸ್ವಲ್ಪ ಗೊಂದಲವಾದರೂ ನಂತರದ ವ್ಯವಸ್ಥೆ ಅಚ್ಚುಕಟ್ಟಾಗಿದ್ದು, ಮೆಚ್ಚುಗೆಗೆ ಪಾತ್ರವಾಯಿತು. ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಸೇರಿ ಅಧಿಕಾರಿಗಳು ಮಾಧ್ಯಮ ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಬೆಳಗ್ಗೆ ೭.೩೦ರ ಸುಮಾರಿಗೆ ಭದ್ರತಾ ಕೊಠಡಿಗಳನ್ನು ತೆರೆಯಲಾಯಿತು. ಈ ವೇಳೆ ಅಭ್ಯರ್ಥಿಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಎ.ಎಸ್. ಪೊನ್ನಣ್ಣ ಹಾಗೂ ಪಕ್ಷೇತರ ಅಭ್ಯರ್ಥಿಗಳು ಇದ್ದರು. ಕೆ.ಜಿ. ಬೋಪಯ್ಯ ಕೊನೆಯ ತನಕವೂ ಎಣಿಕೆ ಕೇಂದ್ರಕ್ಕೆ ಬಂದಿರಲಿಲ್ಲ.

ಬೆಳಗ್ಗೆ ೮ ಗಂಟೆಗೆ ಸರಿಯಾಗಿ ಎಣಿಕೆ ಕಾರ್ಯ ಆರಂಭವಾಯಿತು. ಮೊದಲಿಗೆ ಅಂಚೆ ಮತ್ತು ಸೇವಾ ಮತಗಳ ಎಣಿಕೆ ನಡೆಯಿತು. ೯ ಗಂಟೆಯ ಸುಮಾರಿಗೆ ಮೊದಲ ಸುತ್ತಿನ ಎಣಿಕೆಯ ಫಲಿತಾಂಶ ಲಭ್ಯವಾಯಿತು. ವಿರಾಜಪೇಟೆ ಕ್ಷೇತ್ರದ ಎಣಿಕೆ ಹೆಚ್ಚು ವೇಗವಾಗಿ ನಡೆಯುತ್ತಿತ್ತು. ಹಾಗಾಗಿ ೧೨ ಗಂಟೆಯ ಸುಮಾರಿಗೆ ವಿರಾಜಪೇಟೆ ಕ್ಷೇತ್ರದ ಅಂತಿಮ ಫಲಿತಾಂಶ ಲಭ್ಯವಾಯಿತು. ೧೨.೩೦ರ ಹೊತ್ತಿಗೆ ಮಡಿಕೇರಿ ಕ್ಷೇತ್ರದ ಅಂತಿಮ ಫಲಿತಾಂಶ ಪ್ರಕಟವಾಯಿತು.

ವಿರಾಜಪೇಟೆ ಕ್ಷೇತ್ರದ ಮತ ಎಣಿಕೆ ಸಂದರ್ಭದಲ್ಲಿ ಆರಂಭದ ೮ ಸುತ್ತುಗಳಲ್ಲಿ ಕೆ.ಜಿ. ಬೋಪಯ್ಯ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ ನಂತರ ಎ.ಎಸ್. ಪೊನ್ನಣ್ಣ ಪರ ಮುನ್ನಡೆ ಕಂಡುಬಂತು. ಮಡಿಕೇರಿ ಕ್ಷೇತ್ರದಲ್ಲಿ ಆರಂಭದಿಂದಲೂ ಡಾ. ಮಂಥರ್ ಗೌಡ ಅವರೇ ಮುಂದಿದ್ದರು. ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದ್ದಂತೆಯೇ ಎಣಿಕೆ ಕೇಂದ್ರದ ಬಳಿ ಪಕ್ಷದ ಕಾರ್ಯಕರ್ತರು, ಮುಖಂಡರು ಜಮಾಯಿಸಲಾರಂಭಿಸಿದರು. ಪೊನ್ನಣ್ಣ ಗೆಲುವು ಘೋಷಣೆ ಆಗುತ್ತಿದ್ದಂತೆಯೇ ಸಂಭ್ರಮ ಮುಗಿಲು ಮುಟ್ಟಿತು. ಕಾಂಗ್ರೆಸ್ ಮತ್ತು ಪೊನ್ನಣ್ಣ ಪರ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.

ಮಡಿಕೇರಿ ಕ್ಷೇತ್ರದ ಫಲಿತಾಂಶ ಘೋಷಣೆ ಆದ ನಂತರ ಡಾ. ಮಂಥರ್ ಗೌಡ ಪತ್ನಿ ಜೊತೆ ಎಣಿಕೆ ಕೇಂದ್ರಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಮಂಥರ್ ಗೌಡ ಅವರನ್ನು ಹೆಗಲ ಮೇಲೆ ಹೊತ್ತು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಕಾರ್ಯಕರ್ತರು, ಮುಖಂಡರ ಖುಷಿಗೆ ಪಾರವೇ ಇಲ್ಲದಂತಾಗಿತ್ತು. ದಶಕಗಳ ನಂತರ ವಿಧಾನಸಭಾ ಚುನಾವಣೆಯಲ್ಲಿ ಸಿಕ್ಕಿದ ಗೆಲುವು ಬಹುತೇಕರನ್ನು ಭಾವುಕರನ್ನಾಗಿಸಿತು. ಇಷ್ಟು ದಿನಗಳ ಶ್ರಮಕ್ಕೆ ಫಲ ಸಿಕ್ಕಿದೆ ಎಂದು ಪರಸ್ಪರ ಅಪ್ಪುಗೆ, ಹಸ್ತಲಾಘವ ಮುಖಾಂತರ ಶುಭಾಶಯ ವಿನಿಮಯ ಮಾಡಿಕೊಂಡರು.

ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಲೋಕ ಸಭಾ ಚುನಾವಣೆಯೂ ಬರುತ್ತಿದ್ದು ಆಗಲೂ ಇದೇ ರೀತಿ ಪಕ್ಷಕ್ಕೆ ಅಧಿಕಾರ ತರುವ ಸಂಕಲ್ಪ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net