ಗಾಂಧಿ ಮೆಚ್ಚಿದ್ದ ಆಧುನಿಕ ಬ್ರಹ್ಮ

2 ckm 5
Published on

ಚಿಕ್ಕಮಗಳೂರು: ಬ್ರಹ್ಮನ ಸೃಷ್ಟಿಯಲ್ಲಿ ಜಾತಿ, ಮತವಿದೆ. ಆದರೆ ಆಧುನಿಕ ಬ್ರಹ್ಮ ನಾರಾಯಣಗುರು ಸ್ಥಾಪಿಸಿರುವ ಶಿವನ ಮಠದಲ್ಲಿ ಒಂದೇ ಜಾತಿ, ಒಂದೇ ಧರ್ಮ ಎನ್ನುವ ಸಂಪ್ರದಾಯವಿದೆ ಎಂದು ಬ್ರಹ್ಮಶ್ರೀ ನಾರಾಯಣಗುರುಗಳ ಬಗ್ಗೆ ಗಾಂಧಿ ಬಣ್ಣಿಸಿದ್ದರು ಎಂದು ಸಿಡಿಎ ಮಾಜಿ ಅಧ್ಯಕ್ಷ ಬಿ.ರಾಜಪ್ಪ ಹೇಳಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 166ನೇ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಪಣೆ ಮಾಡಿ ಮಾತನಾಡಿದರು.

1854ರಲ್ಲಿ ಕೇರಳ ಸಮಾಜದ ಶೋಷಿತ ವರ್ಗ ತಿಯಾನ್ ಸಮುದಾಯದಲ್ಲಿ ಜನಿಸಿ 23ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ್ದರು. 26ನೇ ವಯಸ್ಸಿನಲ್ಲಿ ಕೇರಳ ಸಂಪ್ರದಾಯದಂತೆ ವರನ ಸಹೋದರಿ ಹೋಗಿ ವಧುವಿಗೆ ವಸ್ತ್ರಗಳನ್ನು ನೀಡಿ ಮದುವೆ ಶಾಸ್ತ್ರವನ್ನು ಮಾಡಿರುತ್ತಾರೆ. ನಾರಾಯಣ ಗುರುಗಳಿಗೆ ಮದುವೆ ಬಗ್ಗೆ ಆಸಕ್ತಿ ಇಲ್ಲದ ಕಾರಣ ವಧುವನ್ನು ಕರೆದು ಸಂಬಂಧ ಇಂದಿಗೆ ಮುಗಿಯಿತು. ನಾನು ಸನ್ಯಾಸ ದೀಕ್ಷೆ ಸ್ವೀಕರಿಸುತ್ತಿದ್ದೇನೆ ಎಂದು ಹೇಳಿ ಶೋಷಿತ ವರ್ಗದ ಧ್ವನಿಯಾಗಿ ನಿಲ್ಲುತ್ತಾರೆ ಎಂದು ವಿವರಿಸಿದರು.

ಸ್ವಾಮಿ ವಿವೇಕಾನಂದರು ಕೇರಳಕ್ಕೆ ಭೇಟಿ ನೀಡಿದಾಗ ಅಲ್ಲಿನ ಸಂಪ್ರದಾಯ ನೋಡಿ ಹುಚ್ಚರ ನಾಡು ಎಂದು ಕರೆಯುತ್ತಾರೆ. ಅದಕ್ಕೆ ಕಾರಣ ಮೇಲ್ಜಾತಿಯವರು ಕೆಳ ವರ್ಗದವರನ್ನು ನಡೆಸಿಕೊಂಡು ಬರುತ್ತಿದ್ದ ರೀತಿ. ನಾರಾಯಣ ಗುರುಗಳು 18ನೇ ಶತಮಾನದಲ್ಲೇ ಶೋಷಿತ ವರ್ಗದ ಗೋಳಾಟ ನೋಡದೆ ಸಾಮೂಹಿಕ ವಿವಾಹ ಪರಿಚಯಿಸಿದ್ದರು. ದೇವಾಲಯಗಳಿಗೆ ಪ್ರವೇಶ ಇಲ್ಲದ ಸಂದರ್ಭ 1888ರಲ್ಲಿ ಶಿವಗಿರಿ ಅಲ್ಲಮಾಪುರದಲ್ಲಿ ಶಿವನ ದೇವಾಲಯ ಸ್ಥಾಪಿಸಿ ಶೋಷಿತ ವರ್ಗಕ್ಕೆ ಪೂಜೆಗೆ ಅವಕಾಶ ಕಲ್ಪಿಸಿದ್ದರು. 1912ರಲ್ಲಿ ಕುದ್ರೋಳಿ ಗೋಕರ್ಣೆಶ್ವರ ದೇವಾಲಯ ಸ್ಥಾಪಿಸಿದ್ದು ಇಂದು ದೊಡ್ಡ ಮಟ್ಟದಲ್ಲಿ ಹೆಸರುವಾಸಿಯಾಗಿ ಎಲ್ಲ ವರ್ಗದವರೂ ಪೂಜಿಸುತ್ತಾರೆ ಎಂದರು.

ಉಪಾಧ್ಯಕ್ಷ ಸಿ.ಆರ್.ಪ್ರೇಮ್ುಮಾರ್, ಜಿಲ್ಲಾ ವಕ್ತಾರ ವರಸಿದ್ಧಿ ವೇಣುಗೋಪಾಲ್, ನಗರ ಮಂಡಲ ಅಧ್ಯಕ್ಷ ಮಧುಕುಮಾರ್ ರಾಜ್ ಅರಸ್, ಒಬಿಸಿ ಮೋರ್ಚಾ ಮಂಡಲ ಅಧ್ಯಕ್ಷ ಬ್ಯಾಟರಿ ಮಂಜು, ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ಶೋಭಾ ರಾಜೇಂದ್ರ, ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಸೀತಾರಾಂ ಭರಣ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net