

ಮಂಡ್ಯ: ಲೋಕಸಭಾ ಚುನಾವಣೆ ಹೊತ್ತಿನಲ್ಲಿ ರಾಜ್ಯ ಸರ್ಕಾರ ಖಾಲಿ ಇದ್ದ ನಿಗಮ/ಮಂಡಳಿ/ಪ್ರಾಧಿಕಾರಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದೆ. ಅಂತೆಯೇ ಏಕೈಕ ಹಾಗೂ ಜಿಲ್ಲೆಯ ಜೀವನಾಡಿ ಮೈಷುಗರ್ ಕಾರ್ಖಾನೆಗೆ ನೂತನ ಅಧ್ಯಕ್ಷಗಾದಿ ಸಿ.ಡಿ.ಗಂಗಾಧರ ಅವರಿಗೆ ಒಲಿದಿದೆ.
1997ರಲ್ಲಿ ಕಾಂಗ್ರೆಸ್ ಮೂಲಕವೇ ರಾಜಕೀಯ ಜೀವನ ಆರಂಭಿಸಿದ ಗಂಗಾಧರ, ಜಿಲ್ಲಾ ಪಂಚಾಯಿ ಸ್ಥಾಯಿ ಸಮಿತಿ ಅಧ್ಯಕ್ಷ, 2006ರಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ, ಶಿಕ್ಷಕರ ಕ್ಷೇತ್ರದ ಚುನಾವಣೆಯ ರಾಜ್ಯ ಉಪಾಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಪಕ್ಷಕ್ಕೆ ಸಲ್ಲಿಸಿದ ಸೇವೆ ಪರಿಗಣಿಸಿ ಹಾಗೂ ಹಿರಿತನದ ಆಧಾರದ ಮೇಲೆ ಕಾಂಗ್ರೆಸ್ ಪಕ್ಷ ಮಹತ್ವದ ಜವಾಬ್ದಾರಿಯನ್ನು ನೀಡಿದೆ.