

ತುಮಕೂರು: ಪಾವಗಡ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ, ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ನಿನ್ನೆ ( ಗುರುವಾರ) ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮನೆಗೆ ಭೇಟಿ ನೀಡಿ ನೈತಿಕ ಸ್ಥೈರ್ಯ ತುಂಬಿದ್ದಾರೆ.
ಈ ಹಿನ್ನೆಲೆಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ಕುಮಾರಸ್ವಾಮಿಯೇ ಮಹಾನಾಯಕ ಇರಬೇಕು. ಅವರೇ ಒಕ್ಕಲಿಗ ಸಮುಯದಾಯ ನಾಯಕ. ಎಸ್ಐಟಿ ಪೊಲೀಸರು ಕುಮಾರಸ್ವಾಮಿ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಳ್ಳಬೇಕು. ಕುಮಾರಸ್ವಾಮಿಗೆ ಎಲ್ಲಾ ಗೊತ್ತಿದ್ದ ಮೇಲೆ ಎಸ್ಐಟಿ ಅವರಿವರನ್ನು ಕೇಳುವ ಬದಲು, ಕುಮಾರಸ್ವಾಮಿಯ ಸ್ಟೇಟ್ಮೆಂಟ್ ತೆಗೆದುಕೊಳ್ಳಲಿ. ಸತ್ಯ ಹೊರತರುವ ಕೆಲಸ ಮಾಡಲಿ. ಸತ್ಯ ಹೊರತರಲು ಕುಮಾರಸ್ವಾಮಿ ಸಹಕಾರ ನೀಡಲಿ ಎಂದು ಟಾಂಗ್ ನೀಡಿದರು. ಇದನ್ನೂ ಓದಿರಿ ಅರಸೀಕೆರೆ ಹೆಂಗಸರು ನನ್ನ ಮುಖ ಕಂಡ ಕೂಡಲೇ ಬೈತಾರೆ: ಶಾಸಕ ಶಿವಲಿಂಗೇಗೌಡ ಅಳಲು
ಮೇಲ್ನೋಟಕ್ಕೆ ಇದು ಬ್ಲ್ಯಾಕ್ ಮೇಲ್ ಪ್ರಕರಣ ಅನ್ನಿಸುತ್ತಿದೆ. ಬಹಳ ದಿನಗಳ ಪಿತೂರಿ ನಡೆದಿದೆ. ಎಡಿಟ್ ಮಾಡಿ, ರಷ್ಯಾದಿಂದ ಅಪ್ಲೋಡ್ ಮಾಡಿದಂತೆ ಮಾಡಿದ್ದಾರೆ. ಸಾಮಾನ್ಯವಾದ ಜನರು ಮಾಡುವಂತಹ ಕೆಲಸ ಇದಲ್ಲ. ತಾಂತ್ರಿಕ ನೈಪುಣ್ಯತೆ, ಹಣಕಾಸಿನ ನೆರವುಬೇಕು. ದೊಡ್ಡ ಷಡ್ಯಂತರ, ಪಿತೂರಿ ಇದರ ಹಿಂದಿದೆ. ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಷಡ್ಯಂತರದ ಹಿಂದೆ ಯಾರಿದ್ದಾರೆ ಅಂತ ಗೊತ್ತಾಗುವುದಿಲ್ಲ. ಇವತ್ತು-ನಾಳೆ ಇದರ ಹಿಂದೆ ಯಾರಿದ್ದಾರೆ ಅಂತ ಗೊತ್ತಾಗುತ್ತದೆ. ಮಹಾನಾಯಕ ಯಾರಿಗೆ ಬೇಕಾದರೂ ಆಗಬಹುದು. ಅಶೋಕ್, ವಿಜಯೇಂದ್ರ ಇನ್ನೊಬ್ಬನಿಗೂ ಮಹಾನಾಯಕ ಅಂತ ಹೇಳಬಹುದು. ವಿನಾಕಾರಣ ಯಾರ ಹೆಸರನ್ನೂ ಹೇಳಬಾರದು, ತೇಜೋವಧೆ ಮಾಡಬಾರದು ಎಂದರು.