

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ತೆ ಎನ್ನಲಾಗಿರುವ ಯುವತಿ ಮ್ಯಾಜಿಸ್ಟ್ರೇಟ್ ಎದುರು ದಾಖಲಿಸಿರುವ ಪ್ರಮಾಣೀಕೃತ ಹೇಳಿಕೆಯನ್ನು ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಕೆಯಾಗಿದೆ.
ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 164ರ ಅಡಿ ತಮ್ಮ ಮಗಳು ದಾಖಲಿಸಿರುವ ಹೇಳಿಕೆ ರದ್ದುಪಡಿಸುವಂತೆ ಕೋರಿ ಸಂತ್ರಸ್ತೆಯ ತಂದೆ ಬುಧವಾರ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಗೃಹ ಇಲಾಖೆಯ ಕಾರ್ಯದರ್ಶಿ, ವಿಶೇಷ ತನಿಖಾ ತಂಡ (ಎಸ್‌ಐಟಿ) ಹಾಗೂ ಕಬ್ಬನ್ ಪಾರ್ಕ್ ಠಾಣೆ ತನಿಖಾಧಿಕಾರಿಗಳನ್ನು ಪ್ರತಿವಾದಿಯನ್ನಾಗಿಸಲಾಗಿದ್ದು, ಅರ್ಜಿ ಇನ್ನಷ್ಟೇ ನ್ಯಾಯಪೀಠದ ಮುಂದೆ ವಿಚಾರಣೆಗೆ ಬರಬೇಕಿದೆ.
ಅರ್ಜಿಯಲ್ಲೇನಿದೆ?
* ಸಿಡಿ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ನನ್ನ ಮಗಳು ಮಾ.30ರಂದು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯದಲ್ಲಿ ಪ್ರಮಾಣಿಕೃತ ಹೇಳಿಕೆ ದಾಖಲಿಸಿದ್ದಾಳೆ. ಸ್ವಇಚ್ಛೆಯಿಂದ ಹೇಳಿಕೆ ನೀಡುವ ಸ್ಥಿತಿಯಲ್ಲಿ ಆಕೆ ಇಲ್ಲ, ಯಾವುದೋ ಒತ್ತಡ ಹಾಗೂ ಪ್ರಭಾವಕ್ಕೆ ಒಳಗಾಗಿ ಈ ಹೇಳಿಕೆ ದಾಖಲಿಸಿದ್ದಾಳೆ. ಆದ್ದರಿಂದ, ಅವಳ ಹೇಳಿಕೆ ಪರಿಗಣಿಸಬಾರದು.
* ಮಗಳ ಹೇಳಿಕೆ ದಾಖಲಿಸುವ ಸಂದರ್ಭದಲ್ಲಿ ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಉಪಸ್ಥಿತಿಯಲ್ಲಿದ್ದರು. ಅವರ ಉಪಸ್ಥಿತಿಯಲ್ಲಿ ಮಗಳ ಹೇಳಿಕೆ ದಾಖಲಿಸಲಾಗಿದ್ದು, ಹೇಳಿಕೆ ದಾಖಲಿಸಿರುವ ಪ್ರಕ್ರಿಯೆ ಕಾನೂನು ಬಾಹಿರವಾಗಿದೆ.
* ನಾನು, ನನ್ನ ಕುಟುಂಬ ಮತ್ತು ಮಗಳು ರಾಜಕೀಯದ ಬಲಿಪಶುಗಳಾಗಿದ್ದೇವೆ. ಸಿಡಿ ಪ್ರಕರಣದಲ್ಲಿ ನನ್ನ ಮಗಳನ್ನು ಸಂತ್ರಸ್ತೆಯನ್ನಾಗಿಸಲಾಗಿದೆ. ಮಗಳ ಹಾಗೂ ಕುಟುಂಬದ ಗೌರವ, ಘನತೆ ಮತ್ತು ವ್ಯಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನ ನಡೆದಿದೆ.
* ಲೈಂಗಿಕ ಪ್ರಕರಣಗಳಲ್ಲಿ ವೈದ್ಯಕೀಯ ತಪಾಸಣೆ ಪ್ರಮುಖವಾಗಿರುತ್ತದೆ. ಆದರೆ, ಈ ಪ್ರಕರಣದಲ್ಲಿ ಮಗಳ ವೈದ್ಯಕೀಯ ಪರೀಕ್ಷೆ ನಡೆಸದೆ ಹೇಳಿಕೆ ದಾಖಲಿಸಲಾಗಿದ್ದು, ಮಾ.30ರಂದು ನಡೆದಿರುವ ಮಗಳ ಹೇಳಿಕೆ ದಾಖಲು ಪ್ರಕ್ರಿಯೆಯನ್ನು ರದ್ದುಪಡಿಸಬೇಕು.
* ಈ ಅರ್ಜಿ ಇತ್ಯರ್ಥವಾಗುವರೆಗೂ ಮಗಳ ಪ್ರಮಾಣೀಕೃತ ಹೇಳಿಕೆ ಆಧರಿಸಿ ಯಾವುದೇ ಮುಂದಿನ ಕ್ರಮ ಜರುಗಿಸದಂತೆ ಎಸ್‌ಐಟಿ ಮತ್ತು ಕಬ್ಬನ್ ಪಾರ್ಕ್ ಠಾಣೆ ತನಿಖಾಧಿಕಾರಿಗಳಿಗೆ ಮಧ್ಯಂತರ ಆದೇಶ ನೀಡಬೇಕು.