ಸವಣೂರಿಗೆ ಸಿಸಿ ಕ್ಯಾಮರಾ ಕಣ್ಗಾವಲು

CCTV camera surveillance for Savanur
Published on

ಸವಣೂರ: ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಪುರಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಸಿಸಿ ಕ್ಯಾಮರಾ ಅಳವಡಿಸಿದ್ದು, ದಿನನಿತ್ಯದ ಘಟನೆಗಳ ಮೇಲೆ ಹದ್ದಿನ ಕಣ್ಣಿರಿಸಲಾಗುತ್ತಿದೆ.

ಪೊಲೀಸ್ ಇಲಾಖೆ ಸ್ಥಳೀಯ ಪುರಸಭೆಗೆ ಸಿಸಿ ಕ್ಯಾಮರಾ ಅಳವಡಿಕೆಗೆ ಬೇಡಿಕೆ ಇಟ್ಟಿತ್ತು. ಈ ಹಿನ್ನೆಲೆಯಲ್ಲಿ ಪುರಸಭೆ 2023-24ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ಸುಮಾರು 20 ಲಕ್ಷ ರೂಪಾಯಿ ಅನುದಾನ ಮೀಸಲಿರಿಸಿತ್ತು. ಇದೀಗ ಪಟ್ಟಣದ ಬಸ್ ನಿಲ್ದಾಣ ರಸ್ತೆ, ಬಂಕಾಪುರ, ಡಾ. ಬಿ.ಆರ್. ಅಂಬೇಡ್ಕರ್, ಗೋಕಾಕ, ಎಚ್​ಎಲ್​ವಿ ಸ್ಕೂಲ್, ಚಾವಡಿ, ಭರಮಲಿಂಗೇಶ್ವರ, ಇಂದಿರಾ, ಶುಕ್ರವಾರ ಪೇಟೆ, ಬುಧವಾರ ಪೇಟೆ ವೃತ್ತ ಸೇರಿದಂತೆ ಒಟ್ಟು 38 ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದು, ಕಾರ್ಯಾಚರಣೆ ಆರಂಭವಾಗಿದೆ.

ಎಲ್ಲ ಸ್ಥಳಗಳಲ್ಲಿನ ಸಿಸಿ ಕ್ಯಾಮರಾ ಸೆರೆ ಹಿಡಿಯುವ ದೃಶ್ಯಗಳ ವೀಕ್ಷಣೆ ಹಾಗೂ ಸಂಗ್ರಹಕ್ಕೆ ಪೊಲೀಸ್ ಠಾಣೆ ಮತ್ತು ಪುರಸಭೆ ಕಾರ್ಯಾಲಯದಲ್ಲಿ ಕೇಂದ್ರ ಸ್ಥಾಪಿಸಲಾಗಿದೆ. ಅಲ್ಲದೆ, ಸಿಸಿ ಕ್ಯಾಮರಾಗಳ ದೃಶ್ಯಗಳನ್ನು ಆಗಾಗ ವೀಕ್ಷಣೆ ಮಾಡಲು ಎರಡೂ ಕಚೇರಿಗಳಲ್ಲಿ ದೊಡ್ಡ ಪರದೆ ಅಳವಡಿಸಲಾಗಿದೆ. ಸಿಬ್ಬಂದಿ ನಿಗಾ ಇಡಲಿದ್ದಾರೆ.

ಈ ಮೊದಲು ಪಟ್ಟಣದಲ್ಲಿ ಅಪರಾಧ ಕೃತ್ಯ ನಡೆದಾಗ ಅದರ ನಿಯಂತ್ರಣ ಮತ್ತು ಅಪರಾಧಿಗಳ ಪತ್ತೆಗೆ ಪರದಾಡುವಂತಾಗಿತ್ತು. ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಣ್ಣಪುಟ್ಟ ವಿಚಾರಕ್ಕೆ ನಡೆದ ಗಲಾಟೆಗಳಲ್ಲಿ ಪಾಲ್ಗೊಂಡ ಪುಂಡರು ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಅಪರಾಧ ಚಟುವಟಿಕೆಗಳ ನಿಯಂತ್ರಣ ಮತ್ತು ಪತ್ತೆಗೆ ಪೊಲೀಸರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಟ್ಟಣದ ಸೂಕ್ಷ ್ಮ ಅತಿ ಸೂಕ್ಷ್ಮ, ಆಯ್ದ ಪ್ರದೇಶ ಮತ್ತು ಪ್ರಮುಖ ಮಾರ್ಗಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ಪಟ್ಟಣದ ತುಂಬ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಸಿಸಿ ಕ್ಯಾಮರಾಗಳ ಅಳವಡಿಕೆಯಿಂದ ಅಪರಾಧ ಕೃತ್ಯಗಳ ನಿಯಂತ್ರಣದ ಜತೆಗೆ ಪಟ್ಟಣದ ಸ್ವಚ್ಛತೆಗೆ ಹೆಚ್ಚು ಅನುಕೂಲವಾಗಲಿದೆ. ಪಟ್ಟಣದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವ ಪ್ರವೃತ್ತಿಗೆ ಕಡಿವಾಣ ಹಾಕಲು ಸ್ಥಳೀಯ ಪುರಸಭೆ ದಿಟ್ಟ ಹೆಜ್ಜೆ ಇಟ್ಟಿದೆ.

ಪೊಲೀಸ್ ಇಲಾಖೆಯ ಬಹುದಿನದ ಬೇಡಿಕೆ ಹಾಗೂ ಪುರಸಭೆಯ ಅನುಕೂಲಕ್ಕಾಗಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ, ಸಾರ್ವಜನಿಕರು ಕಂಡುಕಂಡಲ್ಲಿ ಕಸ ಎಸೆದಲ್ಲಿ ಸಾಕ್ಷಿ ಸಮೇತ ದಂಡ ವಿಧಿಸಲು ಅನುಕೂಲವಾಗಲಿದೆ. ಸ್ವಚ್ಛತೆಗೆ ಆದ್ಯತೆ ನೀಡುವುದನ್ನು ಸರ್ವರೂ ರೂಢಿಸಿಕೊಳ್ಳಬೇಕು. ತಪ್ಪಿದಲ್ಲಿ ದಂಡ ಕಟ್ಟುವುದು ಅನಿವಾರ್ಯವಾಗಲಿದೆ. | ನೀಲಪ್ಪ ಹಾದಿಮನಿ, ಮುಖ್ಯಾಧಿಕಾರಿ ಪುರಸಭೆ ಸವಣೂರ ಸಿಸಿ ಕ್ಯಾಮರಾ ಅಳವಡಿಸಿರುವುದರಿಂದ ಪುರಸಭೆ, ಪೊಲೀಸ್ ಇಲಾಖೆಗೆ ಸಹಕಾರಿಯಾಗಿದೆ. ಅಪರಾಧ ಕೃತ್ಯ ನಡೆಸುವವರು ಎಚ್ಚರಿಕೆ ವಹಿಸುವುದು ಅವಶ್ಯವಾಗಿದೆ. ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಕಂಡ ಕಂಡಲ್ಲಿ ವಾಹನ ನಿಲ್ಲಿಸಿದಲ್ಲಿ ವಾಹನ ಜಪ್ತಿಗೆ ಸಿಸಿ ಕ್ಯಾಮರಾ ಬಹಳಷ್ಟು ಅನಕೂಲವಾಗಲಿದೆ. | ಆನಂದ ಒನಕುದರೆ, ಪಿಐ ಸವಣೂರ ಪೊಲೀಸ್ ಠಾಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net