

ಕಳೆದ ನಾಲ್ಕು ವರ್ಷಗಳಿಂದಲೂ ಅರಣ್ಯ ಪ್ರದೇಶದ ಹತ್ತಿರವಿರುವ ಗ್ರಾಮಗಳಲ್ಲಿ ಚಿರತೆಗಳ ಕಾಟ ಅಧಿಕವಾಗಿದೆ. ಅರಣ್ಯ ಇಲಾಖೆ ಇದುವರೆಗೆ 3 ಚಿರತೆಗಳನ್ನು ಹಿಡಿದು ದೂರದ ಅರಣ್ಯಕ್ಕೆ ಬಿಟ್ಟಿದ್ದರೂ, ಈ ಕಾಟ ನಿಂತಿಲ್ಲ.
ತಾಲೂಕಿನ ಹಲವು ಗ್ರಾಮಗಳಲ್ಲಿ ಪ್ರತಿದಿನ ಚಿರತೆ ಕಾಣಿಸುತ್ತಿದೆ. ಈ ಗ್ರಾಮಗಳಲ್ಲಿ ಶಾಲೆ-ಕಾಲೇಜುಗಳಿಗೆ ಹೋಗುವ ಮಕ್ಕಳ ಪೋಷಕರು ಬೆಳಿಗ್ಗೆ ಮತ್ತು ಸಂಜೆ ನಿಲ್ದಾಣದಲ್ಲಿ ಕಾದು ಮಕ್ಕಳನ್ನು ಕರೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ ವಾಹನಗಳು ಸಹ ಮಕ್ಕಳನ್ನು ಮನೆಯ ಬಳಿಯೇ ಕರೆತಂದು ಬಿಡುತ್ತಿವೆ.
| ಚಿರತೆ ಕಾಣಿಸಿಕೊಳ್ಳುತ್ತಿರುವ ಪ್ರಮುಖ ಗ್ರಾಮಗಳು | |
| ದೇವರಹಹಳ್ಳಿ | ವಿ.ರಾಮೇನಹಳ್ಳಿ |
| ಹೊನ್ನನಾಯಕನಹಳ್ಳಿ | ಹೊದಿಗೆರೆ |
| ವಡ್ನಾಳ್ | ಗೊಪ್ಪೇನಹಳ್ಳಿ |
| ಗೊಲ್ಲರಹಳ್ಳಿ | ಕಂಚಿಗನಾಳು |
| ಮಲಹಾಳು | ಕಲ್ಕೆರೆ |
| ತಾವರೆಕೆರೆ |
ಹಲವು ಗ್ರಾಮಗಳಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ.
ಚನ್ನಗಿರಿ ವಲಯ ಅರಣ್ಯಾಧಿಕಾರಿ ಎಸ್. ಶ್ವೇತಾ ಅವರು ಪ್ರತಿಕ್ರಿಯಿಸಿ, "ಆಹಾರ ಅರಸಿ ಕಾಡು ಪ್ರಾಣಿಗಳು ನಾಡಿಗೆ ಬರುವುದು ಸಹಜ. ಆದರೆ ಅವು ಮನುಷ್ಯರನ್ನು ಕಂಡರೆ ಭಯ ಪಡುತ್ತವೆ. ಜನರು ಎಚ್ಚರದಿಂದ ಇರಬೇಕು," ಎಂದು ತಿಳಿಸಿದ್ದಾರೆ.
"ಇಲಾಖೆಯಿಂದ ಚಿರತೆ ಹಿಡಿಯಲು ಕ್ರಮ ತೆಗೆದುಕೊಳ್ಳಲಾಗಿದೆ. ಸಂಜೆಯ ನಂತರ ಅನಾವಶ್ಯಕವಾಗಿ ಯಾರೂ ಮನೆಯಿಂದ ಹೊರಗೆ ತಿರುಗಾಡಬಾರದು," ಎಂದು ಅವರು ಮನವಿ ಮಾಡಿದ್ದಾರೆ.