ಮಾನವಸಹಿತ ರೈಲ್ವೆ ಲೆವೆಲ್ ಕ್ರಾಸಿಂಗ್​ನಲ್ಲಿ ಸಿಸಿಟಿವಿ ಕ್ಯಾಮರಾ

New CTV New
Published on

ಹುಬ್ಬಳ್ಳಿ : ತಮಿಳುನಾಡಿನ ಕದ್ದಲೂರೆ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಶಾಲಾ ವ್ಯಾನ್​ಗೆ ರೈಲು ಡಿಕ್ಕಿ ಹೊಡೆದು ಮೂವರು ಬಾಲಕರು ಮೃತಪಟ್ಟಿರುವ ನಂತರ ಎಚ್ಚೆತ್ತಿರುವ ರೈಲ್ವೆ ಇಲಾಖೆ, ದೇಶಾದ್ಯಂತ ಮಾನವಸಹಿತ ಲೆವೆಲ್ ಕ್ರಾಸ್ಸಿಂಗ್​ನಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲು ಮುಂದಾಗಿದೆ.

ಈ ಅಪಘಾತದ ನಂತರ ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದಿಂದ ಹೆಚ್ಚು ರೈಲುಗಳ ಸಂಚಾರ ಇರುವ ಹೊಸಪೇಟೆಯ ಮಾನವಸಹಿತ ಲೆವೆಲ್ ನಾನ್ ಇಂಟರ್ ಲಾಕ್ಡ ಲೆವೆಲ್ ಕ್ರಾಸ್ಸಿಂಗ್​ನಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಯಿತು.

ಈ ಕಾರ್ಯದಿಂದ ರೈಲು ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮರಾ ಮೂಲಕ ಕ್ರಾಸಿಂಗ್​ನ ದೃಶ್ಯ ವೀಕ್ಷಿಸಿ, ರೈಲು ಸಂಚಾರಕ್ಕೆ ಸಿಗ್ನಲ್ ನೀಡಲು ಅನುಕೂಲವಾಯಿತು. ಹೊಸಪೇಟೆಯ ಮಾನವಸಹಿತ ಲೆವೆಲ್ ನಾನ್ ಇಂಟರ್ ಲಾಕ್ಡ ಲೆವೆಲ್ ಕ್ರಾಸ್ಸಿಂಗ್​ನಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿರುವ ಕಾರ್ಯ ಯಶಸ್ಸಾಗುತ್ತಿದ್ದಂತೆಯೇ ಇಡೀ ದೇಶದಲ್ಲಿ ಈ ಮಾದರಿ ಅಳವಡಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ.

ಪ್ರತಿಯೊಂದು ಮಾನವಸಹಿತ ನಾನ್​ಇಂಟರ್​ಲಾಕ್ಡ್ ಎಲ್​ಸಿ ಗೇಟ್​ನಲ್ಲಿ ಈಗ ಕನಿಷ್ಠ ಎರಡು ಐಪಿ ಸಕ್ರಿಯ ಸಿಸಿಟಿವಿ ಕ್ಯಾಮೆರಾಗಳು (ಪ್ರತಿ ಬದಿಗೆ ಒಂದು) ನೆಟ್​ವರ್ಕ್ ವಿಡಿಯೋ ರೆಕಾರ್ಡರ್​ಗಳು, ತಡೆರಹಿತ ವಿದ್ಯುತ್ ಸರಬರಾಜು ವ್ಯವಸ್ಥೆಗಳು ಮತ್ತು ಸೌರ ಫಲಕಗಳಂತಹ ಮೂಲಸೌಕರ್ಯಗಳನ್ನು ಹೊಂದಿವೆ.

ಈ ನೈಜ ಸಮಯದ ವೀಡಿಯೋ ಫೀಡ್​ಗಳಿಗೆ ಸ್ಟೇಷನ್ ಮಾಸ್ಟರ್​ಗಳು ಹಾಗೂ ಇಂಜಿನಿಯರಿಂಗ್ ನಿಯಂತ್ರಣದವರು ಪ್ರತ್ಯಕ್ಷ ವೀಕ್ಷಣೆಗೆ ಸಹಾಯವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಮುಕುಲ್ ಸರಣ ಮಾಥುರ್, ಲೆವೆಲ್ ಕ್ರಾಸಿಂಗ್​ಗಳಲ್ಲಿ ಸಿಸಿಟಿವಿ ಅಳವಡಿಕೆ ಒಂದು ಗೇಮ್​ಚೇಂಜರ್ ಆಗಿದ್ದು, ಇದು ಸ್ಟೇಷನ್ ಮಾಸ್ಟರ್​ಗಳಿಗೆ ಗೇಟ್ ಕಾರ್ಯುಚರಣೆಯ ನೇರ ಮೇಲ್ವಿಚಾರಣೆಯೆಂಬ ಅಮೂಲ್ಯ ಸಾಧನವನ್ನು ಒದಗಿಸುತ್ತದೆ ಮತ್ತು ರೈಲು ಸಂಚಾರವನ್ನು ತೊಂದರೆ ಇಲ್ಲದೇ ನಿರ್ವಹಿಸಲು ನೆರವಾಗುತ್ತದೆ. ಇದು ರಸ್ತೆ ಹಾಗೂ ರೈಲು ಬಳಕೆದಾರರಿಬ್ಬರಿಗೂ ಲಾಭದಾಯಕವಾಗಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net