22 ಸಾವಿರ ಕ್ವಿಂಟಾಲ್ ಹತ್ತಿ ಖರೀದಿಸಿದ ಸಿಸಿಐ

25 LXR 5
Published on

ಮಲ್ಲು ಕಳಸಾಪುರ ಲಕ್ಷ್ಮೇಶ್ವರ ಮುಕ್ತ ಮಾರುಕಟ್ಟೆಯಲ್ಲಿ ಬಿಳಿಬಂಗಾರ (ಹತ್ತಿ)ದ ದರ ನಿರಂತರವಾಗಿ ದರ ಕುಸಿತ ಕಾಣುತ್ತಿದ್ದು, ಬೆಳೆಗಾರರು ಹತ್ತಿ ಮಾರಾಟ ಮಾಡಲು ಭಾರತೀಯ ಹತ್ತಿ ನಿಗಮ(ಸಿಸಿಐ)ದ ಕೇಂದ್ರಕ್ಕೆ ಮುಗಿಬೀಳುತ್ತಿದ್ದಾರೆ. ಪಟ್ಟಣದಲ್ಲಿ ಖರೀದಿ ಕೇಂದ್ರಕ್ಕೆ ಲಕ್ಷ್ಮೇಶ್ವರ ತಾಲೂಕು ಮಾತ್ರವಲ್ಲದೆ, ಶಿರಹಟ್ಟಿ, ಗದಗ, ಕುಂದಗೋಳ, ಶಿಗ್ಗಾಂವಿ, ಸವಣೂರ ಭಾಗದ ಬೆಳೆಗಾರರರು ಆಗಮಿಸುತ್ತಿದ್ದಾರೆ. ಹಗಲು-ರಾತ್ರಿ ಹತ್ತಿ ಮಾರಾಟಕ್ಕೆ ಟ್ರಾೃಕ್ಟರ್‌ಗಳು ಸಾಲುಗಟ್ಟಿ ನಿಲ್ಲುತ್ತಿವೆೆ. ಕುಸಿತ ನಿರಂತರ: ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಹತ್ತಿಗೆ 6,000 ರೂ.ದಿಂದ 7000 ರೂ.ವರೆಗೆ ಇದೆ. ಮೂರು ವರ್ಷದ ಹಿಂದೆ ಮಾತ್ರ ರೈತರಿಗೆ ಉತ್ತಮ ದರ ಸಿಕ್ಕಿತ್ತು. ಆ ನಂತರ ಪ್ರತಿ ವರ್ಷವೂ ದರ ಇಳಿಮುಖವಾಗುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಆದರೀಗ ಲಕ್ಷ್ಮೇಶ್ವರದಲ್ಲಿ ಭಾರತೀಯ ಹತ್ತಿ ನಿಗಮದಿಂದ ಬೆಂಬಲ ಬೆಲೆಗೆ ಸಕಾಲದಲ್ಲಿ ಹತ್ತಿ ಖರೀದಿಸುತ್ತಿರುವುದು ರೈತರಿಗೆ ವರದಾನವಾಗಿ ಪರಿಣಮಿಸಿದೆ. ಸಿಸಿಐ ಕೇಂದ್ರದಲ್ಲಿ ಪ್ರತಿ ಕ್ವಿಂಟಲ್‌ಗೆ ಕಳೆದ 2 ವರ್ಷದಿಂದ ಬೆಲೆಯೂ ಬರುತ್ತಿರಲಿಲ್ಲ, ಇನ್ನೊಂದೆಡೆ ಇಳುವರಿಯೂ ಕುಂಠಿತವಾಗುತ್ತಿದ್ದ ಕಾರಣ ರೈತರು ಹತ್ತಿ ಬೆಳೆಯಲು ಹಿಂದೇಟು ಹಾಕುತ್ತಿದ್ದರು. ರೈತರ ಜತೆಗೆ ವ್ಯಾಪಾರಸ್ಥರು, ಜಿನ್ನಿಂಗ್ ಮಾಲೀಕರು ವ್ಯಾಪಾರ- ವಹಿವಾಟಿನಿಂದ ಹಿಂದೆ ಸರಿಯುತ್ತಿದ್ದರು. ಲಕ್ಷ್ಮೇಶ್ವರದಲ್ಲಿನ ನೂಲಿನ ಹತ್ತಿ ಗಿರಣಿ, ಜಿನ್ನಿಂಗ್, ಪ್ರೆಸ್ಸಿಂಗ್ ಮಿಲ್‌ಗಳು ಧೂಳು ತಿನ್ನುತ್ತಿದ್ದು ಹತ್ತಿ ನಂಬಿದವರು ಸಂಕಷ್ಟ ಪಡುವಂತಾಗಿದೆ. ಖಾಸಗಿಯವರು ಹಿಂದೇಟು: ತಾಲೂಕಿನಲ್ಲಿ ಪ್ರಸಕ್ತ ವರ್ಷ 8,100 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ಸರಿಯಾಗಿ ಮಳೆಯಾಗದೆ ಮತ್ತು ರೋಗಬಾಧೆ, ವ್ಯತಿರಿಕ್ತ ಹವಾಮಾನದಿಂದ ಪ್ರತಿ ಎಕರೆಗೆ 20 ಕ್ವಿಂಟಾಲ್ ಹತ್ತಿ ನಿರೀಕ್ಷಿಸಿದ್ದ ರೈತರ ಪಾಲಿಗೆ ಸಿಕ್ಕಿದ್ದು ಸಾಮಾನ್ಯವಾಗಿ 5 ಕ್ವಿಂಟಾಲ್ ಮಾತ್ರ. ಆದರೆ, ಮಾರುಕಟ್ಟೆಯಲ್ಲಿ ಹತ್ತಿ ಮತ್ತು ಹತ್ತು ಉಪ ಉತ್ಪನ್ನಗಳಿಗೆ ಬೇಡಿಕೆ ಇಲ್ಲದ್ದರಿಂದ ಹಾಗೂ ಈ ವರ್ಷ ಕೊಂಚ ಗುಣಮಟ್ಟವೂ ಇಲ್ಲದ್ದರಿಂದ ಹತ್ತಿ ಬೆಲೆ ಸಂಪೂರ್ಣ ಕುಸಿದಿದೆ. ಖರೀದಿದಾರರೂ ಹಿಂದೇಟು ಹಾಕಿದ್ದರಿಂದ ರೈತರು ಅನಿವಾರ್ಯವಾಗಿ ಭಾರತೀಯ ಹತ್ತಿ ನಿಗಮದ ಕೇಂದ್ರಕ್ಕೆ ಮೊರೆ ಹೋಗುತ್ತಿದ್ದಾರೆ.

ಭಾರತೀಯ ಹತ್ತಿ ನಿಗಮದಿಂದ 1,500ಕ್ಕೂ ಹೆಚ್ಚು ರೈತರಿಂದ ಪ್ರತಿ ಕ್ವಿಂಟಲ್‌ಗೆ 7,421 ರೂ ಮತ್ತು 7,346 ರೂ. ದರಕ್ಕೆ ಈಗಾಗಲೇ 21,982 ಕ್ವಿಂಟಾಲ್( 4 ಸಾವಿರ ಬೇಲ್) ಹತ್ತಿ ಖರೀದಿಸಲಾಗಿದೆ. 8ರಿಂದ 10 ದಿನಗಳಲ್ಲಿ ರೈತರ ಖಾತೆಗೆ ಹಣ ಜಮೆಯಾಗುತ್ತಿದೆ. ರೈತರು ಈ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು. ಜಿ.ರಮೇಶ, ಭಾರತೀಯ ಹತ್ತಿ ನಿಗಮದ ಅಧಿಕಾರಿ ಕಳೆದ 3 ವರ್ಷಗಳ ಹಿಂದೆ ಪ್ರತಿ ಕ್ವಿಂಟಾಲ್‌ಗೆ 12 ರಿಂದ 15 ಸಾವಿರ ರೂ. ವರೆಗೆ ಮಾರಾಟವಾಗಿದ್ದ ಹತ್ತಿ 2 ವರ್ಷದಿಂದ 7 ಸಾವಿರ ದಾಟುತ್ತಿಲ್ಲ. 20 ಕ್ವಿಂಟಾಲ್ ಹತ್ತಿ ಬೆಳೆಯುತ್ತಿದ್ದ ರೈತರು 5 ಕ್ವಿಂಟಾಲ್‌ಗೆ ತೃಪ್ತಿಪಡುವಂತಾಗಿದೆ. ಮಾರುಕಟ್ಟೆಯಲ್ಲಿ ಬೆಲೆಯೂ ಇಲ್ಲದ ಸಂದರ್ಭದಲ್ಲಿ ಸಿಸಿಐದ ಬೆಂಬಲ ಬೆಲೆ ಖರೀದಿ ಕೇಂದ್ರ ಸಕಾಲದಲ್ಲಿ ಪ್ರಾರಂಭಗೊಂಡಿರುವುದು ರೈತರಿಗೆ ಆಸರೆಯಾಗಿದೆ. ರಾಜು ಅಂದಲಗಿ, ಹತ್ತಿ ಬೆಳೆಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net