ಸಿಸಿಬಿ ಕಾರ್ಯಾಚರಣೆ 16.40 ಲಕ್ಷ ರೂ. ಮೌಲ್ಯದ ಡ್ರಗ್ಸ್ ಪತ್ತೆ

ಪ್ರಣಾಮ್ ಕೋಟ್ಯಾನ್
ಪ್ರಣಾಮ್ ಕೋಟ್ಯಾನ್
Published on
ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 16.40 ಲಕ್ಷ ರೂ. ಮೌಲ್ಯದ ಒಟ್ಟು 164 ಗ್ರಾಂ ಎಂಡಿಎಂಎ ಮಾದಕವಸ್ತು ಪತ್ತೆ ಮಾಡಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಹೊಯ್ಗೆಬಜಾರ್ ನಿವಾಸಿ ಪ್ರಣಾಮ್ ಕೋಟ್ಯಾನ್ (30) ಹಾಗೂ ಮೂಲತಃ ವಳಚ್ಚಿಲ್ ಪದವು ನಿವಾಸಿ, ಪ್ರಸ್ತುತ ಪದವಿನಂಗಡಿ ಗುರುನಗರದಲ್ಲಿ ವಾಸವಿದ್ದ ಧನರಾಜ್ ಪೂಜಾರಿ ( 33) ಬಂಧಿತರು.
ಮಂಗಳೂರು ನಗರದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಿಷೇಧಿತ ಮಾದಕವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿದ್ದರು.
ಪ್ರಕರಣ -1
ಬೆಂಗಳೂರು ನಗರದಿಂದ ಎಂಡಿಎಂಎ ಮಾದಕವಸ್ತುವನ್ನು ಖರೀದಿಸಿ ಮಂಗಳೂರು ನಗರಕ್ಕೆ ತಂದು ಹೊಯ್ಗೆಬಜಾರ್ ಪರಿಸರದಲ್ಲಿರುವ ಮನೆಯಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಶುಕ್ರವಾರ ದಾಳಿ ನಡೆಸಿ ಆರೋಪಿ ಪ್ರಣಾಮ್ ಕೋಟ್ಯಾನ್‌ನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಸುಮಾರು 10,40,000 ರೂ. ಮೌಲ್ಯದ 104 ಗ್ರಾಂ ಎಂಡಿಎಂಎ ಹಾಗೂ ಮೊಬೈಲ್ ಫೋನ್, ಜಿಪ್ ಲಾಕ್ ಕವರ್, ಡಿಜಿಟಲ್ ತೂಕಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಣಾಮ್ ಕೋಟ್ಯಾನ್ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ಹಲ್ಲೆ ಹಾಗೂ ಬೆದರಿಕೆ ಪ್ರಕರಣ, 2026ರಲ್ಲಿ ಮಾದಕವಸ್ತು ಸೇವನೆ ಪ್ರಕರಣ, 2022ರಲ್ಲಿ ಅಬಕಾರಿ ಇಲಾಖೆಯಲ್ಲಿ ಗಾಂಜಾ ಸಂಬಂಧಿತ ಪ್ರಕರಣ ಹಾಗೂ 2022ರಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟ ಪ್ರಕರಣ ದಾಖಲಾಗಿವೆ.
ಪ್ರಕರಣ- 2
ಪದವಿನಂಗಡಿ ಪರಿಸರದಲ್ಲಿರುವ ಮನೆಯಿಂದ ಎಂಡಿಎಂಎ ಮಾದಕವಸ್ತುವನ್ನು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಶುಕ್ರವಾರ ಕಾರ್ಯಾಚರಣೆ ನಡೆಸಿ ಧನರಾಜ್ ಪೂಜಾರಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು 6 ಲಕ್ಷ ರೂ. ಮೌಲ್ಯದ 60 ಗ್ರಾಂ ಎಂಡಿಎಂಎ ಹಾಗೂ ಜಿಪ್-ಲಾಕ್ ಕವರ್‌ಗಳು, ಒಂದು ಮೊಬೈಲ್ ಫೋನ್ ಹಾಗೂ ಡಿಜಿಟಲ್ ತೂಕಮಾಪನ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈತನ ಮೇಲೆ ಮಂಗಳೂರು ದಕ್ಷಿಣ, ಉತ್ತರ, ಸುರತ್ಕಲ್, ಬರ್ಕೆ, ಕಾವೂರು, ಕಂಕನಾಡಿ ನಗರ ಹಾಗೂ ಬಂಟ್ವಾಳ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ಹಲ್ಲೆ, ಬೆದರಿಕೆ ಸೇರಿದಂತೆ ಸುಮಾರು 12 ಪ್ರಕರಣಗಳು ದಾಖಲಾಗಿವೆ. 2016ರಲ್ಲಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗಂಭೀರ ಹಲ್ಲೆ ಪ್ರಕರಣದಲ್ಲಿ ಆರೋಪಿಗೆ 3 ವರ್ಷಗಳ ಶಿಕ್ಷೆಯೂ ವಿಧಿಸಲಾಗಿತ್ತು.
ಈ ಮಾದಕವಸ್ತು ಮಾರಾಟ/ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net