

ಕವಿತಾಳ: ಸಮೀಪದ ಬಾಗಲವಾಡದಲ್ಲಿ ಎಸ್ಸಿಪಿ-ಟಿಎಸ್ಪಿ ಅನುದಾನ ದುರ್ಬಳಕೆ ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಸಿಂಧು ಅವರು ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ರಸ್ತೆ ಕಾಮಗಾರಿ ಪರಿಶೀಲಿಸಿದರು.
ಬಾಗಲವಾಡ ಗ್ರಾಪಂ ವ್ಯಾಪ್ತಿಯ ನಡುಗಡ್ಡೆ ಕ್ಯಾಂಪ್‌ನಲ್ಲಿ 2023-24ನೇ ಸಾಲಿನ ಎಸ್ಸಿಪಿ-ಟಿಎಸ್ಪಿ ಅನುದಾನದಡಿ 15 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿತ್ತು.
ಆದರೆ, ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಸಮುದಾಯದವರು ವಾಸಿಸುವ ಕಡೆ ಕಾಮಗಾರಿ ಮಾಡದೆ ಆಂಧ್ರ ಕ್ಯಾಂಪ್‌ಗಳ ರೈತರ ಹೊಲಗಳಿಗೆ ಹೋಗುವ ರಸ್ತೆಗೆ ಸಿಸಿ ಮಾಡಿದ್ದು ಅನುದಾನ ದುರ್ಬಳಕೆ ಮಾಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ (ಭೀಮವಾದ) ಪದಾಧಿಕಾಗಳು ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ದೂರು ನೀಡಿದ್ದರು. ಕಾಮಗಾರಿ ಪರಿಶೀಲಿಸಿದ ಉಪನಿರ್ದೇಶಕಿ, ಮಾಹಿತಿ ಪಡೆದು ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ತಿಳಿಸಿದರು.