

ಹುಬ್ಬಳ್ಳಿ : ಇಲ್ಲಿನ ಉಣಕಲ್ಲ ಕ್ರಾಸ್ನಿಂದ ಚರ್ಚ್ವರೆಗಿನ ಸಿಸಿ ರಸ್ತೆ ಕಾಮಗಾರಿಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ಶಾಸಕ ಮಹೇಶ ಟೆಂಗಿನಕಾಯಿ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ.
ನಗರದಲ್ಲಿ ಬುಧವಾರ ಆಯೋಜಿಸಿದ್ದ ವಾರ್ಡ್ ನಂ. 36, 37, 38ರ ವ್ಯಾಪ್ತಿಯ ಉಣಕಲ್ ಕ್ರಾಸ್ನಿಂದ ಚರ್ಚ್ವರೆಗಿನ ಸಿಸಿ ರಸ್ತೆ ಕಾಮಗಾರಿ ಹಾಗೂ ಇತರ ಅಭಿವೃದ್ಧಿ ಕಾರ್ಯಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಜನವರಿಯಲ್ಲಿ ಈ ಭಾಗದ ಶ್ರೀ ಸಿದ್ದಪ್ಪಜ್ಜನ ಜಾತ್ರಾ ಮಹೋತ್ಸವ ನೆರವೇರಲಿದೆ. ಜಾತ್ರೆಗೆ ಸಾವಿರಾರು ಭಕ್ತರು ಸೇರುತ್ತಾರೆ. ಹೀಗಾಗಿ, ಉಳಿದಿರುವ ಬಾಕಿ ಕಾಮಗಾರಿಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರ ಚೌಶೆಟ್ಟಿ ಅವರಿಗೆ ಶಾಸಕರು ಸೂಚನೆ ನೀಡಿದರು.
ರಸ್ತೆ ಕಾಮಗಾರಿಗೆ ಅಗತ್ಯ ಇದ್ದ ಸಾರ್ವಜನಿಕರ 160 ಆಸ್ತಿಗಳನ್ನು ಈಗಾಗಲೇ ಪಾಲಿಕೆ ಅಧಿಕಾರಿಗಳು ಗುರುತಿಸಿದ್ದಾರೆ. ಅದರಲ್ಲಿ 55 ಆಸ್ತಿಗಳ ಮಾಲೀಕರಿಗೆ ಪರಿಹಾರ ಮೊತ್ತ ನೀಡಿ, ಭೂಮಿಯನ್ನು ಪಾಲಿಕೆ ವಶಕ್ಕೆ ಪಡೆಯಲಾಗಿದೆ. ಇನ್ನುಳಿದ ಆಸ್ತಿಗಳನ್ನು ಶೀಘ್ರ ವಶಕ್ಕೆ ಪಡೆದುಕೊಳ್ಳಲಾಗುವುದು ಎಂದು ಪಾಲಿಕೆ ನೋಡಲ್ ಅಧಿಕಾರಿ ಎಸ್. ಕೆಂಭಾವಿ ತಿಳಿಸಿದರು.
ಮತ್ತೆ 15 ದಿನಗಳ ನಂತರ ಈ ಸಭೆಯ ಮುಂದುವರಿದ ಭಾಗವಾಗಿ ಪರಿಶೀಲನಾ ಸಭೆ ಮಾಡಲಾಗುವುದು ಎಂದು ಶಾಸಕ ಟೆಂಗಿನಕಾಯಿ ಹೇಳಿದರು.
ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ತಿಪ್ಪಣ್ಣ ಮಜ್ಜಗಿ, ಉಮೇಶಗೌಡ ಕೌಜಲಗಿ, ಪಾಲಿಕೆ ವಲಯ ಸಹಾಯಕ ಆಯುಕ್ತರು, ಲೋಕೊಪಯೋಗಿ, ಹೆಸ್ಕಾಂ, ಎಲ್ ಆಂಡ್ ಟಿ ಕಂಪನಿ ಅಧಿಕಾರಿಗಳು, ನೋಂದಾವಣಾಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.