

ವಿಜಯವಾಣಿ ಸುದ್ದಿಜಾಲ ಗದಗ
ಕಾಂಗ್ರೆಸ್ ಅಂದರೆ ಡೇಂಜರ್, ಹುಷಾರಾಗಿರಬೇಕು. ಅವರು ಅಧಿಕಾರಕ್ಕೆ ಬಂದರೆ ಪಿತ್ರಾಜಿರ್ತ ಆಸ್ತಿಯಲ್ಲಿ ಸರ್ಕಾರಕ್ಕೆ ಶೇ.55 ರಷ್ಟು ತೆರಿಗೆ ಕಟ್ಟುವ ಕಾನೂನು ತರಲಿದ್ದಾರೆ. ಆ ರೀತಿಯ ಕಾನೂನು ತಂದರೆ ಸಾಮಾಜಿಕ ಸ್ವಾಸ್ಥ ಕೆಡುತ್ತದೆ ಎಂದು ಸಿ.ಸಿ. ಪಾಟೀಲ ಹೇಳಿದರು.
ಗದಗ ನಗರದಲ್ಲಿ ಗುರುವಾರ ಬಸವರಾಜ ಬೊಮ್ಮಾಯಿ ಪರ ಮತ ಯಾಚನೆ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಇಡೀ ದೇಶವನ್ನು ಒಗ್ಗೂಡಿಸಿ ದೇಶದಲ್ಲಿ ಭಯೋತ್ಪಾದನೆ ಹೊಡೆದೋಡಿಸಿ, ಭಯೋತ್ಪಾದಕರಿಗೆ ಭಯ ಹುಟ್ಟುವಂತೆ ಮಾಡಿದ್ದಾರೆ. ಪ್ರತಿ ಮನೆಗೆ ಕುಡಿಯುವ ನೀರು ಕೊಡುವುದು ಅಸಾಧ್ಯ ಎಂದು ಎಲ್ಲರೂ ಹೇಳಿದರು. ಮೋದಿಯವರು ಅಸಾಧ್ಯವನ್ನು ಸಾಧ್ಯ ಮಾಡಿದರು. ಕೊವಿಡ್ ಸಮಯದಲ್ಲಿ 130 ಕೋಟಿ ಜನರಿಗೆ ಉಚಿತ ಲಿಸಿಕೆ ಕೊಟ್ಟು ಜೀವ ಉಳಿಸಿದರು. ಕಾಂಗ್ರೆಸ್ ನವರು ಮೋದಿಯವರ ಲಸಿಕೆ ತೆಗೆದುಕೊಳ್ಳಬೇಡಿ, ಮಕ್ಕಳಲಾಗುವುದಿಲ್ಲ ಎಂದು ಹೇಳಿದರು. ಕಾಂಗ್ರೆಸ್ಸಿನ ಮುಖಂಡರೇ ಲಸಿಕೆ ಹಾಕಿಸಿಕೊಂಡರು. ಕಾಂಗ್ರೆಸ್ ಹೇಳುವುದೆಲ್ಲವೂ ಹಸಿ ಸುಳ್ಳು ಎಂದು ಸಿ.ಸಿ. ಪಾಟೀಲ ಹೇಳಿದರು.
ಬಿಜೆಪಿ ಸರ್ಕಾರ ಜಾರಿ ತಂದಿದ್ದ ರೈತ ವಿದ್ಯಾನಿಧಿ, ರೈತ ಶಕ್ತಿ ಯೋಜನೆ ನಿಲ್ಲಿಸಿದ್ದಾರೆ. ಬರ ಬಂದರೂ ರಾಜ್ಯದ ರೈತರಿಗೆ ರಾಜ್ಯ ಸರ್ಕಾರ ತನ್ನ ಖಜಾನೆಯಿಂದ ಒಂದು ಪೈಸೆ ಪರಿಹಾರ ಕೊಟ್ಟಿಲ್ಲ. ಇದು ರೈತ ವಿರೋಧಿ ದರಿದ್ರ ಸರ್ಕಾರ. ಮೋದಿಯವರು ಕೊವಿಡ್ ಸಂದರ್ಭದಲ್ಲಿ ಹತ್ತು ಕೆಜಿ ಅಕ್ಕಿ ಕೊಟ್ಟರು. ಈಗ ಐದು ಕೆಜಿ ಅಕ್ಕಿ ಕೊಡುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ನಾವೇ ಅಕ್ಕಿ ಕೊಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಲೋಕಸಭೆ ಚುನಾವಣೆ ಮುಗಿದ ಮೇಲೆ ರಾಜ್ಯದಲ್ಲಿ ಮತ್ತೆ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ಭವಿಷ್ಯ ನುಡಿದರು.