

ವಿಜಯವಾಣಿ ಸುದ್ದಿಜಾಲ ಗದಗ
ಹತ್ತು ಕೆಜಿ ಅಕ್ಕಿ ವಿತರಿಸುವ ಘೋಷಣೆಗೂ ಮುನ್ನ ಅಕ್ಕಿಯನ್ನು ಎಲ್ಲಿ ಖರೀದಿಸಬೇಕು ಎಂಬ ಆಲೋಚನೆಯೂ ಇಲ್ಲದೇ ಘೋಷಣೆ ಮಾಡಿದ್ದು ಹಾಸ್ಯಾಸ್ಪದ. ಈಗ ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಮೇಲೆ ಹರಿಹಾಯ್ದರು. "ಬದ್ಧತೆ ಇರುವ ನಾಯಕರಾಗಿದ್ದರೆ ಕೇಂದ್ರ ನೀಡುವ 5 ಕೆಜಿ ಅಕ್ಕಿಯಲ್ಲಿ ನಿಮ್ಮ ಪಾತ್ರವೇನು ಎಂಬುದನ್ನು ಸ್ಪಷ್ಟಪಡಿಸಿ. 5 ಕೆಜಿ ಅಕ್ಕಿ ಜೊತೆಗೆ 175 ರೂ. ನೀಡುತ್ತೇವೆ ಎಂದು ಘೋಷಣೆ ಮಾಡಿದ್ದೀರಿ. 175 ರೂ.ಗೆ 3 ಕೆಜಿ ಅಕ್ಕಿ ಮಾತ್ರ ದೊರೆಯುತ್ತದೆ. ಹಣ ಕೊಡುವುದಾದರೇ 10 ಕೆಜಿ ಅಕ್ಕಿಯ ಸಂಪೂಣರ್ಣ ಹಣವನ್ನು ಲಾನುಭವಿ ಖಾತೆಗೆ ಜಮೆ ಮಾಡಿ ಎಂದು ಆಗ್ರಹಿಸಿದರು.
ಹಣಕಾಸಿನ ಹೊರೆಯ ಕಲ್ಪನೆಯಿಲ್ಲದೇ ಚುನಾವಣೆ ಪ್ರಣಾಳಿಕೆಯಲ್ಲಿ ಮಾಡಿದ ಘೋಷಣೆಗಳನ್ನು ಯಾವ ರೀತಿಯಲ್ಲಿ ಈಡೇರಿಸಲು ಸಾಧ್ಯವಾಗುತ್ತದೆ ಎಂಬುದರ ಕುರಿತು ಕಾಂಗ್ರೆಸ್ ನಾಯಕರಲ್ಲೇ ಗೊಂದಲ ಏರ್ಪಟ್ಟಿದೆ. ಅಧಿಕಾರಕ್ಕೆ ಬಂದ ನಂತರ ಘೋಷಣೆಗಳ ಈಡೇರಿಕೆಗೆ ಬೇಕಾದ ಸಂಪನ್ಮೂಲಗಳ ಅರಿವು ಕಾಂಗ್ರೆಸ್ ನಾಯಕರಿಗೇ ಇಲ್ಲ ಎಂದು ಕಿಡಿಕಾರಿದ ಸಿ.ಸಿ. ಪಾಟೀಲ ಕಾಂಗ್ರೆಸ್ಸಿಗರಿಗೆ ಚುನಾವಣೆ ತಂತ್ರಗಾರಿಕೆ ಹೇಳಿಕೊಟ್ಟವರ್ಯಾರು? ಎಂದು ವ್ಯಂಗ್ಯವಾಡಿದರು.
ಉಚಿತ ಪ್ರಯಾಣದ ಹೊರೆಯನ್ನು ರಾಜ್ಯ ಸರ್ಕಾರ ಭರಿಸಬೇಕು. ಶಾಲಾ ಕಾಲೇಜ್ ವಿದ್ಯಾಥಿರ್ಗಳಿಗೆ ಹಾಗೂ ಇತರೆ ಪ್ರಯಾಣಿಕರಿಗೆ ಹೊರೆಯಾಗುತ್ತಿದೆ. ಕಂಡಿಷನ್ ಹಾಕದೇ ರಾಜ್ಯದ ಪ್ರತಿಯೊಬ್ಬರಿಗೂ 200 ಯುನಿಟ್ ವಿದ್ಯುತ್ ಉಚಿತ ಎಂದು ಹೇಳುತ್ತ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈಗ ಕಂಡಿಷನ್ ಮೂಲಕ 200 ಯುನಿಟ್ ಉಚಿತ ವಿದ್ಯುತ್ ವಿತರಣೆಗೆ ಕ್ರಮ ಜರುಗಿಸುತ್ತಿದೆ ಎಂದು ಆರೋಪಿಸಿದರು. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜಾರಿ ಮಾಡಲು ಆಸಕ್ತಿ ವಹಿಸುತ್ತಿರುವ ಏಕರೂಪ ಕಾನೂನು ಸ್ವಾಗತಿಸುತ್ತೇವೆ ಎಂದು ಸಿ.ಸಿ. ಪಾಟೀಲ ಹೇಳಿದರು.
ಪಾಂತರಿಗಳಿಂದ ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ ಎಂಬ ಮಾತನ್ನು ತಳ್ಳಿ ಹಾಕಿದ ಸಿ. ಸಿ. ಪಾಟೀಲ ಹೊಸಬರು ಬಿಜೆಪಿಗೆ ಬಂದಿದ್ದರಿಂದಲೇ ಸರ್ಕಾರ ರಚಿಸಲು ಸಾಧ್ಯವಾಯಿತು. ಅವರಿಂದ ಪಕ್ಷ ಹಾಳಾಯಿತು ಎಂಬ ಮಾತು ಶುದ್ಧ ಸುಳ್ಳು ಎಂದರು.
ಎಸ್.ವಿ. ಸಂಕನೂರ, ಮುತ್ತಣ್ಣ ಲಿಂಗನಗೌಡ್ರ, ಎಂ.ಎಸ್. ಕರಿಗೌಡ್ರ, ಸುನಂದಾ ಬಾಕಳೆ ಇತರರು ಇದ್ದರು.