ಕಾಂಗ್ರೆಸ್ ಆರ್ಥಿಕ ಶಿಸ್ತು ವಿಫಲ: ಸಿ.ಸಿ. ಪಾಟೀಲ

images (5)
Published on

ವಿಜಯವಾಣಿ ಸುದ್ದಿಜಾಲ ಗದಗ
ಬಿಜೆಪಿ ಸರಕಾರದ 40 ಪ್ರತಿಶತ ಕಮಿಷನ್ ಉಳಿಸಿಕೊಂಡು ಗ್ಯಾರಂಟಿ ಯೋಜನೆ‌ ಕೊಡುತ್ತೆವೆ ಎಂದು ಸಿದ್ದರಾಮಯ್ಯ ಹೇಳಿದ್ದರು.‌ ಈಗ ಅದೇ ಗ್ಯಾರಂಟಿ ಯೋಜನೆ ಉಳಿಸಲು ಬೆಲೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿದ್ದಾರೆ.‌ ಹಾಗಿದ್ದರೆ 40 ಪ್ರತಿಶತ ಕಮಿಷನ್ ಎಲ್ಲಿ ಹೋಯಿತು ಎಂದು ನರಗುಂದ ಶಾಸಕ ಸಿ.ಸಿ. ಪಾಟೀಲ ಪ್ರಸ್ನಿಸಿದರು.

ಭಾನುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ನಿಜವಾಗಿಯೂ ಬಿಜೆಪಿಯ ಭ್ರಷ್ಟಾಚಾರದ 40 ಪ್ರತಿಶತ ಕಮಿಷನ್ ಉಳಿಸಿಕೊಂಡಿದ್ದರೆ ಇವತ್ತು ಬೆಲೆ ಏರಿಕೆ ಮಾಡುವ ಅನಿವಾರ್ಯತೆ ಬರುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಆರು ತಿಂಗಳ ಹಿಂದೆ ಯಾವುದೇ ರೀತಿಯ ಬೆಲೆ ಏರಿಕೆ ಮಾಡುವುದಿಲ್ಲ ಎಂದವರು, ಆರು ತಿಂಗಳಲ್ಲಿಯೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ಹಾಲು, ಬಸ್ ದರ, ತೆರಿಗೆ, ಮುದ್ರಾಂಕ ಶುಲ್ಕ, ನೀರಿನ ದರವನ್ನೂ ಏರಿಕೆ ಮಾಡಿದ್ದಾರೆ. ಇದೆಲ್ಲವನ್ನು ನೋಡಿದರೆ ಆಡು ಮುಟ್ಟದ ಸೊಪ್ಪಿಲ್ಲ, ಸಿದ್ದರಾಮಯ್ಯ ಬೆಲೆ ಏರಿಕೆ ಮಾಡದ ವಸ್ತುವಿಲ್ಲ ಎಂದು ಲೇವಡಿ ಮಾಡಿದರು.

ಗ್ಯಾರಂಟಿ ಕಾರ್ಯಕ್ರಮಗಳ ಬಗ್ಗೆ ನಮ್ಮ ಆಕ್ಷೇಪ ಇಲ್ಲ. ಬಡವರಿಗೆ ಕಾರ್ಯಕ್ರಮಗಳನ್ನು ಮಾಡಬೇಕು. ಆದರೆ ಯೋಜನೆ ಜಾರಿಗೆ ಮುನ್ನ ಭವಿಷ್ಯದ ಸಾಮಾಜಿಕ, ಆರ್ಥಿಕ ಪರಿಸ್ಥಿತಿ, ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಬೇಕು. 12 ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಆರ್ಥಿಕ ಶಿಸ್ತು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಗ್ಯಾರಂಟಿ ಯೋಜನೆಗಳಿಂದ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ಬಂದ ಮಾಡಿಸಲು ಸಿದ್ದರಾಮಯ್ಯ ಅವರೇ ಶಾಸಕರ ಮೂಲಕ ಒತ್ತಡ ಸೃಷ್ಟಿಸುವ ಹುನ್ನಾರ ನಡೆಸಿದ್ದಾರೆ. ಈಗಾಗಲೇ ಇಬ್ಬರು ಹಿರಿಯ ಕಾಂಗ್ರೆಸ್ ಶಾಸಕರು ಗ್ಯಾರಂಟಿ ಬಗ್ಗೆ ಅಪಸ್ವರ ಎತ್ತಿದ್ದಾರೆ. ಅದಕ್ಕೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದು ಆಪಾದಿಸಿದರು.

ತೈಲ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಮತ್ತು ಬಸ್ ದರ ಏರಿಕೆಯಾಗಲಿದೆ. ಆ ಮೂಲಕ ಶಕ್ತಿ ಯೋಜನೆಗೆ ಬೇಕಾದ ಹಣವನ್ನು ಬೆಲೆ ಏರಿಕೆ ಮೂಲಕ ಭರಿಸಿಕೊಳ್ಳುತ್ತಿದೆ. ಇನ್ನುಳಿದ ನಾಲ್ಕು ಯೋಜನೆಗಳಿಗೆ ಸರಕಾರ ಮತ್ತೆ ಯಾವ ರೀತಿ ಬೆಲೆ ಏರಿಕೆ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ರಾಜ್ಯ ಸರಕಾರದ ಈ ನಿರ್ಧಾರವನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ ಎಂದರು.

ನಾಳೆ ಪ್ರತಿಭಟನೆ
ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ ಮಾತನಾಡಿ, ರಾಜ್ಯ ಸರಕಾರ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಜೂನ್ 17 ರಂದು ಬೆಳಗ್ಗೆ 11 ಗಂಟೆಗೆ ಹಳೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.

ನಗರಸಭೆ ಅಧ್ಯಕ್ಷೆ ಉಷಾ ದಾಸರ, ಅನಿಲ ಅಬ್ಬಿಗೇರಿ, ಎಂ.ಎಸ್. ಕರಿಗೌಡ್ರ, ಜಗನ್ನಾಥಸಾ ಭಾಂಡಗೆ, ದತ್ತಣ್ಣ ಜೋಶಿ, ಎಂ.ಎಂ. ಹಿರೇಮಠ, ಸಿದ್ದು ಪಲ್ಲೇದ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net