

ಎನ್.ಆರ್.ಪುರ: ಸೋಮವಾರದಿಂದ ಆರಂಭಗೊಳ್ಳಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತಾಲೂಕಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕರೊನಾ ಸಂದರ್ಭದಲ್ಲಿ ಶಾಲೆಗೆ ನೋಂದಾವಣಿ ಆದವರು ಹಾಗೂ ಶಾಲೆಗೆ ದೀರ್ಘ ಗೈರಾದವರನ್ನು ಹೊರತು ಪಡೆಸಿ ಈ ವರ್ಷ 958 ವಿದ್ಯಾರ್ಥಿಗಳಿಗೆ ಪ್ರವೇಶಪತ್ರ ಲಭಿಸಿದೆ ಎಂದು ಬಿಇ ಕೆ.ಆರ್.ಪುಷ್ಪಾ ತಿಳಿಸಿದ್ದಾರೆ.
ಎನ್.ಆರ್.ಪುರದ ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಡಿಸಿಎಂಸಿ, ಬಾಳೆಹೊನ್ನೂರಿನ ಸರ್ಕಾರಿ ಪ್ರೌಢಶಾಲೆ ಮತ್ತು ಎಸ್‌ಜೆಆರ್‌ಜಿಸಿಯಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗಿದೆ. 4 ಪರೀಕ್ಷಾ ಕೇಂದ್ರದಲ್ಲೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪರೀಕ್ಷಾ ಕೇಂದ್ರದಿಂದ 200 ಮೀಟರ್ ಸುತ್ತ 144 ಸೆಕ್ಷನ್ ಜಾರಿ ಮಾಡಿದ್ದು ನಿಷೇಧಾಜ್ಞೆ ಹೇರಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಪರೀಕ್ಷಾ ಕೇಂದ್ರದ ಒಳಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದ ಸಿಬ್ಬಂದಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಹೊರತಾಗಿ ಬೇರೆಯವರಿಗೆ ಪ್ರವೇಶ ಇರುವುದಿಲ್ಲ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಬರಲು ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಬಂದೋಬಸ್ತಿಗಾಗಿ ಪೊಲೀಸರು ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ಈಗಾಗಲೇ ಪ್ರಶ್ನೆಪತ್ರಿಕೆಗಳು ಬಂದಿದ್ದು ಅದನ್ನು ತಾಲೂಕು ಕಚೇರಿಯ ಖಜಾನೆಯಲ್ಲಿ ಸೂಕ್ತ ರಕ್ಷಣೆಯೊಂದಿಗೆ ಇಡಲಾಗಿದೆ ಎಂದಿದ್ದಾರೆ.