

ಶ್ರೀರಂಗಪಟ್ಟಣ: ಪಟ್ಟಣದ ರಂಗನಾಥನಗರದ ಬಡಾವಣೆ ಮನೆ ಮೇಲೆ ಮುಂಜಾನೆ ದೆಹಲಿಯ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದರು.
2ನೇ ವಾರ್ಡ್‌ನ ದಿ.ನಾರಾಯಣ ಅವರ ಮನೆಗೆ ಮಂಗಳವಾರ ಬೆಳಗ್ಗೆ 6 ಗಂಟೆಯಲ್ಲಿ ಕಾರಿನಲ್ಲಿ ಆಗಮಿಸಿದ 6 ಜನ ಅಧಿಕಾರಿಗಳು ಮನೆಯಲ್ಲಿ ಶೋಧ ನಡೆಸಿದರು. ಬಳಿಕ ಲೇ.ನಾರಾಯಣ ಅವರ ಭಾವಮೈದುನನ ಪತ್ನಿ ಶ್ರುತಿ ಅವರ ಕುರಿತು ಕುಟುಂಬಸ್ಥರಲ್ಲಿ ವಿಚಾರಣೆ ನಡೆಸಿದರು.
ಇದರಿಂದ ಕಳವಳಗೊಂಡ ಕುಟುಂಬಸ್ಥರು ಬೆಂಗಳೂರಿನ ಪೊಲೀಸ್ ಅಧಿಕಾರಿಯ ಎಲ್ಲ ಪ್ರಶ್ನೆಗಳಿಗೂ 3 ತಾಸುಗಳ ಕಾಲ ಸಮಂಜಸ ಉತ್ತರ ನೀಡಿದರು. ಈ ವೇಳೆ ಇವರ ದಾಖಲೆಗಳನ್ನು ಬಿಹಾರ ಮೂಲದ ವಂಚಕನೊಬ್ಬ ಬಳಸಿ ವಂಚನೆ ಮಾಡಿರುವುದು ವಿಚಾರಣೆ ವೇಳೆ ಬಯಲಾಯಿತು. ಹಾಗಾಗಿ, ಅಧಿಕಾರಿಗಳು ತನಿಖೆಯ ಪ್ರಮಾಣ ಪತ್ರ ನೀಡಿ ಧೈರ್ಯ ಹೇಳಿ ತೆರಳಿದ್ದಾರೆ.
ಹಿನ್ನೆಲೆ: ದೆಹಲಿ ವ್ಯಾಪ್ತಿಯಲ್ಲಿ ವಂಚಕರ ತಂಡ ದೇಶದ ವಿವಿಧೆಡೆ ಸಾಕಷ್ಟು ಜನರ ಹೆಸರಲ್ಲಿ ನಕಲಿ ಖಾತೆಗಳನ್ನು ತೆರೆದು ಕೋಟ್ಯಂತರ ರೂ.ಲೂಟಿ ಮಾಡಿ ವಂಚನೆ ಮಾಡಿದ್ದಾರೆ.
ದಿ.ನಾರಾಯಣ ಅವರ ಪತ್ನಿಯ ಸಹೋದರ ಭೈರವ ಹೋಟೆಲ್ ಕಾರ್ಮಿಕನಾಗಿದ್ದು, ಈತನ ಪತ್ನಿ ಬೆಂಗಳೂರಿನ ಶ್ರುತಿ ಅವರ ಹೆಸರಿನಲ್ಲಿರುವ ಆಧಾರ್ ಮತ್ತು ಪಾನ್‌ಕಾರ್ಡ್‌ಗಳ ಬಳಸಿ ಸುಮಾರು 60 ಲಕ್ಷ ರೂ. ವ್ಯವಹಾರ ನಡೆಸಿರುವ ಮಾಹಿತಿ ಇ.ಡಿ. ಮತ್ತು ಸಿಬಿಐ ಅಧಿಕಾರಿಗಳಿಗೆ ಲಭಿಸಿದ ಹಿನ್ನೆಲೆ ಮೊಬೈಲ್ ನಂಬರ್ ಜಾಡು ಹಿಡಿದು ಮಂಗಳವಾರ ಬೆಳಗ್ಗೆ ಆಗಮಿಸಿದ್ದಾರೆ.
ಇಲ್ಲಿ ಅವರ ಪುಟ್ಟ ಮನೆ, ಕೂಲಿ ಕಾರ್ಮಿಕ ಜೀವನ, ಬಡತನದ ಸಂಸಾರವನ್ನು ಕಂಡ ಅಧಿಕಾರಿಗಳು ತಪಾಸಣೆ ನಡೆಸಿ, ಶ್ರುತಿ ಬಾಣಂತಿ ಆದ ಕಾರಣ ಆಕೆ ತವರಿನಲ್ಲಿದ್ದು, ಆಕೆಯ ಪತಿ ಭೈರವ, ಈತನ ಅಕ್ಕ ಮತ್ತು ಕುಟುಂಬದ ಸದಸ್ಯರು ಪ್ರಾಮಾಣಿಕ ಉತ್ತರ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ವಾಪಸ್ ತೆರಳಿದ್ದಾರೆ.