

ರಾಮನಗರ: ''ನನ್ನ ಮಗನನ್ನು ಕಂಡರೆ ಸರ್ಕಾರ ಮತ್ತು ಅಧಿಕಾರಿಗಳಿಗೆ ಪ್ರೀತಿ. ಅದಕ್ಕಾಗಿಯೇ ಪದೇಪದೆ ನನ್ನ ಮಗನನ್ನ ಟಾರ್ಗೆಟ್ ಮಾಡ್ತಿದ್ದಾರೆ. ಅವರಿಗೂ ಮಾಡೋಕೆ ಕೆಲಸವಿಲ್ಲ ಸುಮ್ಮನೆ ನಮ್ಮ ಮನೆಕಡೆ ತಿರುಗುತ್ತಾರೆ...'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ಆಕ್ರೋಶ ಹೊರಹಾಕಿದ್ದಾರೆ.
ಇಂದು(ಸೋಮವಾರ) ಬೆಳ್ಳಂಬೆಳಗ್ಗೆಯೇ ಡಿಕೆಶಿ ಮತ್ತು ಡಿಕೆಸು ಅವರ ನಿವಾಸದ ಮೇಲೆ ಸಿಬಿಐ ದಾಳಿ ಮಾಡಿದೆ. ಈ ಕುರಿತು ಕೋಡಿಹಳ್ಳಿ ನಿವಾಸದಲ್ಲಿ ಮಾತನಾಡಿದ ಗೌರಮ್ಮ, ''ದೊಡ್ಡ ಆಲಹಳ್ಳಿಯ ಮನೆಯಲ್ಲಿ ಪರಿಶೀಲನೆ ನಡೆಸಿ ಅಲ್ಲಿರುವ ಇಟ್ಟಿಗೆಗಳನ್ನು ತೆಗೆದುಕೊಂಡು ಹೋಗಲಿ. ಅವರಿಗೂ ಮಾಡೋಕೆ ಕೆಲಸವಿಲ್ಲ, ಸುಮ್ಮನೆ ತಿರುಗುತ್ತಾರೆ. ಸುಮ್ಮನೆ ನಮ್ಮ ಹೊಟ್ಟೆ ಉರಿಸುತ್ತಿದ್ದಾರೆ. ನನ್ನ ಮಗನನ್ನ ಅವರ ಮನೆಗೆ ಕರೆದುಕೊಂಡು ಕೂರಿಸಿಕೊಳ್ಳಲಿ. ಬೇಕಾದ್ರೆ ನಾನು ಹೋಗಿ ಕುಳಿತುಕೊಳ್ಳುತ್ತೇನೆ. ಸಮಯಕ್ಕೆ ಸರಿಯಾಗಿ ನಮಗೆ ಊಟ ಕೊಟ್ಟರೆ ಸಾಕು'' ಎಂದು ಲೇವಡಿ ಮಾಡಿದರು.
ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ಖಂಡಿಸಿ ಅವರ ಬೆಂಬಲಿಗರು ಬೆಂಗಳೂರು, ಕೋಲಾರ, ರಾಮನಗರ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ. ಇದು ರಾಜಕೀಯ ಪ್ರೇರಿತ, ಉಪಚುನಾವಣೆ ಸಮಯದಲ್ಲಿ ಉದ್ದೇಶಪೂರ್ವಕವಾಗಿ ದಾಳಿ ಮಾಡಿಸಲಾಗಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆರೋಪಿಸಿ ಘೋಷಣೆ ಕೂಗಿದರು.