

ಬಳ್ಳಾರಿ: ಬಳ್ಳಾರಿಗೆ ಮರಳಿದ ಬಳಿಕ ಮೊದಲ ಬಾರಿಗೆ ಸಿಬಿಐ ಬಂಧನದ ನೆನಪನ್ನು ಮಾಜಿ ಸಚಿವ ಜನಾರ್ದನ ರೆಡ್ಡಿ ಮೆಲುಕು ಹಾಕಿದ್ದಾರೆ. ಬಳ್ಳಾರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಕಾರ್ಯಕ್ರಮದ ವೇಳೆ 11ವರ್ಷದ ಹಿಂದೆ ಸಿಬಿಐ ತಮ್ಮನ್ನು ಬಂಧಿಸಿರುವ ಕುರಿತು ರೆಡ್ಡಿ ಮಾತನಾಡಿದರು.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ನನ್ನ ಜತೆ ಬಂಧನವಾಗಿದ್ದ ಅಲಿಖಾನ್ ಅಮಾಯಕ. ಆತ ನನ್ನ ಆಪ್ತ ಎನ್ನುವ ಕಾರಣಕ್ಕೆ ಬಂಧಿಸಿ ಸಿಬಿಐ ಒಳಗೆ ಹಾಕಿತು. ಅದುವರೆಗೂ ಅಲಿಖಾನ್ ಪ್ರಾಮುಖ್ಯತೆ ನನಗೆ ಗೊತ್ತಿರಲಿಲ್ಲ. ಒಬ್ಬ ಒಳ್ಳೆ ಹೃದಯ ಇರುವ ಮನುಷ್ಯ. ನನ್ನ ಸೇವೆಗಾಗಿ, ಆತ್ಮೀಯನಾಗಿ ನನ್ನ ಜತೆ ಇರಲಿ ಎನ್ನುವ ಕಾರಣಕ್ಕೆ ದೇವರು ಸಿಬಿಐನವರಿಗೆ ಹೇಳಿ ಕಳಿಸಿದ್ದ ಅಂದುಕೊಂಡಿದ್ದೇನೆ ಎಂದರು. ಇದೇ ವೇಳೆ ಕ್ರಿಕೆಟ್ ಆಡಿದ ಮಾಜಿ ಸಚಿವ ಜನಾರ್ದನ ರೆಡ್ಡಿ ಬ್ಯಾಟಿಂಗ್ ಮಾಡಿದರು. ಹಾಲಿ ಸಚಿವ ಬಿ.ಶ್ರೀರಾಮುಲು ವಿಕೆಟ್ ಕೀಪರ್ ಆಗಿ ಗಮನ ಸೆಳೆದರು.