

ತುಮಕೂರು : ಕುಣಿಗಲ್ ತಾಲೂಕಿನ ಎಡೆಯೂರು ಕ್ಷೇತ್ರದ ಶಿಂಷಾ ನದಿ ಪಾತ್ರದಲ್ಲಿ ಕಾವೇರಿ ನದಿ ಉತ್ಸವ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರದ ಸ್ವಾತಂತ್ರ್ಯದ 75 ವರ್ಷಗಳ ನೆನಪಿಗಾಗಿ ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ನದಿಗಳ ಉತ್ಸವ ಕಾರ್ಯಕ್ರಮದಡಿ ಕಾವೇರಿ ನದಿ ಉತ್ಸವ ಆಚರಿಸಲಾಗುತ್ತಿದೆ. ನದಿಗಳಲ್ಲಿ ಸ್ವಚ್ಛತೆ ಕಾಪಾಡುವ ಹಾಗೂ ಸಾರ್ವಜನಿಕರಲ್ಲಿ ನದಿಗಳ ಸಂರಕ್ಷಣೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಗಂಗಾ ಉತ್ಸವ-2021 ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ಉತ್ಸವ ಆಯೋಜಿಸಲಾಗಿದೆ ಎಂದರು.
ಗಂಗಾ ಉತ್ಸವದ ರೀತಿಯಲ್ಲಿ ಭಾರತದ ಇತರ ನದಿಗಳ ಉತ್ಸವವನ್ನು ಆಚರಿಸಿ ಯಶಸ್ವಿಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಬಯಸಿರುವ ಹಿನ್ನೆಲೆಯಲ್ಲಿ ಡಿ.22ರಂದು ವಿವಿಧ ಇಲಾಖೆಗಳ ಸಹಕಾರದಲ್ಲಿ ಕಾವೇರಿ ನದಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಯೋಗ, ಧ್ಯಾನ: ನದಿ ಉತ್ಸವದ ಪ್ರಯುಕ್ತ ಅಂದು ಬೆಳಗ್ಗೆ ಯೋಗ ಹಾಗೂ ಧ್ಯಾನ ಕಾರ್ಯಕ್ರಮ, ಶಾಲಾ ಮಕ್ಕಳಿಗಾಗಿ ಚಿತ್ರಕಲೆ, ರಂಗೋಲಿ, ರಸಪ್ರಶ್ನೆ ಸ್ಪರ್ಧೆ, ಸಸಿ ನೆಡುವ ಕಾರ್ಯಕ್ರಮ, ನದಿ ಪಾತ್ರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ವೈ.ಎಸ್.ಪಾಟೀಲ ಹೇಳಿದರು.
ಕಾವೇರಿ ನದಿ ಉತ್ಸವ ಕಾರ್ಯಕ್ರಮದ ಯಶಸ್ವಿಗಾಗಿ ಕಾವೇರಿ ನೀರಾವರಿ ನಿಗಮವನ್ನು ನೋಡಲ್ ಏಜೆನ್ಸಿಯಾಗಿ ನೇಮಕ ಮಾಡಲಾಗಿದ್ದು, ಉತ್ಸವವನ್ನು ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸುವಂತೆ ಕಾವೇರಿ ನೀರಾವರಿ ನಿಗಮ ಹೇಮಾವತಿ ನಾಲಾ ವಲಯದ ಅಧೀಕ್ಷಕ ಇಂಜಿನಿಯರ್ ಎಂ.ವರದಯ್ಯಗೆ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರವಾಡ್, ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ, ಎಡೆಯೂರು ಹೇಮಾವತಿ ನಾಲಾ ವಲಯದ ಕಾರ್ಯನಿರ್ವಾಹಕ ಇಂಜಿನಿಯರ್ ಜಯರಾಮಯ್ಯ, ಕೃಷಿ ಜಂಟಿ ನಿರ್ದೇಶಕಿ ರಾಜಸುಲೋಚನಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ನಂಜಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಶ್ರೀನಿವಾಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಆಯುಕ್ತ ವೇಣುಗೋಪಾಲ್, ಡಿಎಫ್‌ಒ ಡಾ.ಎಸ್.ರಮೇಶ್, ರೂಪಕಲಾ ಮತ್ತಿತರರು ಉಪಸ್ಥಿತರಿದ್ದರು.
ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ! : ಕಾವೇರಿ ನದಿ ಉತ್ಸವದ ಸಂದರ್ಭದಲ್ಲಿ ಸಂಜೆ ಗಂಗಾ ಆರತಿ ಮಾದರಿಯಲ್ಲಿ ಕಾವೇರಿ ಆರತಿ ಹಾಗೂ ದೀಪೋತ್ಸವ ಆಯೋಜಿಸಲಾಗುವುದು. ಅಲ್ಲದೆ, ನದಿಗಳ ಸಂರಕ್ಷಣೆ ಕುರಿತು ಸಂಗೀತ, ನೃತ್ಯ ಕಾರ್ಯಕ್ರಮ, ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರು, ಪರಿಸರ ಸಂರಕ್ಷಣೆ ಮಾಡುವವರನ್ನು ಗುರುತಿಸಿ ಅವರಿಗೆ ಸನ್ಮಾನ ಹಮ್ಮಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ವೈ.ಎಸ್.ಪಾಟೀಲ ಸೂಚನೆ ನೀಡಿದರು.