ತಮಿಳುನಾಡಿಗೆ ಕಾವೇರಿ ನೀರು; 26ರಂದು ಬೆಂಗಳೂರು ಚಲೋ

23sor1
ಸೊರಬದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ರೈತ ಸಂಘದ ಸಭೆಯಲ್ಲಿ ಎನ್.ಕೆ. ಮಂಜುನಾಥಗೌಡ ಮಾತನಾಡಿದರು. ಸೈಯದ್ ಶಫಿವುಲ್ಲಾ, ಈಶ್ವರಪ್ಪ ಕೊಡಕಣಿ, ಸಿ.ವೈ.ರವಿ, ಧನಂಜಯ ಬನ್ನೂರು ಇತರರಿದ್ದರು.
Published on

ಸೊರಬ: ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇರುವಾಗ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದು ಹಾಗೂ ರೈತರ ನೆರವಿಗೆ ಬಾರದ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸೆ.26ರಂದು ಅರಸೀಕೆರೆಯಿಂದ ಬೆಂಗಳೂರು ಚಲೋ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಎನ್.ಕೆ.ಮಂಜುನಾಥ ಗೌಡ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ರೈತ ಸಂಘದಿಂದ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ರೈತರಿಗೆ ಅನೇಕ ಆಶ್ವಾಸನೆಗಳನ್ನು ನೀಡಿತ್ತು. ಆದರೆ, ಅಧಿಕಾರಕ್ಕೆ ಬರುತ್ತಿದ್ದಂತೆ ರೈತರ ನೆರವಿಗೆ ಬರುತ್ತಿಲ್ಲ. ಬರಗಾಲ ಘೋಷಣೆಯಾಗಿದೆ ವಿನಾ, ರೈತರಿಗೆ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಿಲ್ಲ. ಮಳೆ ಕೊರತೆಯಿಂದ ಜಲಮೂಲಗಳಲ್ಲಿ ನೀರಿಲ್ಲದ ಸಂದರ್ಭದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರಮ ಖಂಡನೀಯವಾಗಿದೆ ಎಂದರು.
ರೈತ ಸಂಘದ ರಾಜ್ಯ ಸಂಚಾಲಕ ಉಮೇಶ್ ಎನ್.ಪಾಟೀಲ್ ಮಾತನಾಡಿ, ಕಬ್ಬು ಬೆಳೆಗಾರರು ನಷ್ಟದಲ್ಲಿದ್ದಾರೆ. ತೆಂಗು ಬೆಳೆಗೆ ಬೆಲೆ ಇಲ್ಲದಂತಾಗಿದೆ. ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದ ಅಳಿದುಳಿದ ಬೆಳೆಗಳು ಒಣಗಿ ಹಾಳಾಗುತ್ತಿವೆ. ಅ.4ರಂದು ಸಾವಿರಾರು ರೈತರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಸೈಯದ್ ಶಫಿವುಲ್ಲಾ, ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಶಿಕಾರಿಪುರ ತಾಲೂಕು ಅಧ್ಯಕ್ಷ ಸಿ.ವೈ.ರವಿ, ಮುಖಂಡರಾದ ಧನಂಜಯ ಬನ್ನೂರು, ಶಿವಪ್ಪ ಹುಣಸವಳ್ಳಿ, ಕೃಷ್ಣಪ್ಪ ಶಿಕಾರಿಪುರ, ಈರಮ್ಮ, ಶಿವಕುಮಾರ್, ಲೋಕಪ್ಪ, ಫಕೀರಸ್ವಾಮಿ, ಎಸ್.ವೀರನಗೌಡ ಗಿಣಿವಾಲ, ಜಿ.ಎಸ್.ಚಿತ್ರಶೇಖರಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net