

ನಿಡಗುಂದಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಕರವೇ, ಕನಸೇ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ರೈತ ಸಂಘದ ಕಾರ್ಯಕರ್ತರು ಶುಕ್ರವಾರ ನಿಡಗುಂದಿ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕೆಲ ಸಮಯ ರಸ್ತೆ ತಡೆದು ಪ್ರತಿಭಟಿಸಿ ತಹಸೀಲ್ದಾರ್ ಎ.ಡಿ.ಅಮರವಾಡಗಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯ ಬರಗಾಲದ ಸಂಕಷ್ಟದಲ್ಲಿದ್ದಾಗ ನೀರು ಬಿಡಬೇಡಿ, ಯಾವುದೇ ಸಮಸ್ಯೆಗೂ ಸರ್ಕಾರದೊಂದಿಗೆ ನಾವು ಇದ್ದೇವೆ ಎಂದರೂ ರಾಜಕಾರಣಿಗಳು ತಮ್ಮ ಬೇಳೆ ಬೆಯಿಸಿಕೊಳ್ಳಲು ತಮಿಳುನಾಡಿಗೆ ನೀರು ಹರಿಸಿದ್ದಾರೆ. ಯಾವುದೇ ಪಕ್ಷವೂ ಅಧಿಕಾರದಲ್ಲಿದ್ದಾಗ ರಾಜ್ಯದ ಪರ ನಿರ್ಧಾರ ಕೈಗೊಂಡಿಲ್ಲ. ಒಬ್ಬರ ಮೇಲೆ ಒಬ್ಬರು ಗೂಬೆ ಕೂಡಿಸುವುದನ್ನು ಬಿಟ್ಟು ರಾಜ್ಯದ ಹಿತಾಶಕ್ತಿ ಕಾಪಾಡಬೇಕು. ಕೂಡಲೇ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದರು.
ಕರವೇ (ಪ್ರವೀಣಶೆಟ್ಟಿ ಬಣ) ಜಿಲ್ಲಾಧ್ಯಕ್ಷ ಬಸವರಾಜ ತಾಳಿಕೋಟಿ, ಉಪಾಧ್ಯಕ್ಷ ಸತೀಶ ನರಸರೆಡ್ಡಿ, ರೈತ ಸಂಘದ ಜಿಲಾಧ್ಯಕ್ಷ ನಿಂಗರಾಜ ಆಲೂರ, ರೈತ ಸಂಘದ ಮುಖಂಡ ಬಸವರಾಜ ಬಾಗೇವಾಡಿ, ತಾಲೂಕಾಧ್ಯಕ್ಷ ಸೀತಪ್ಪ ಗಣಿ, ಕರವೇ ತಾಲೂಕಾಧ್ಯಕ್ಷ ಆನಂದ ಹಡಗಲಿ, ಕನಸೇ ತಾಲೂಕಾಧ್ಯಕ್ಷ ಚಂದ್ರು ಹಳಮನಿ, ಆನಂದ ಭೋವಿವಡ್ಡರ, ಕುಮಾರ ಸಾಲಿಮಠ, ಪಾರ್ವತಿ ಲಮಾಣಿ, ರಾಯವ್ವ ಮೇಟಿ, ರೇಷ್ಮಾ ಬಾರಕೇರ, ಸಿದ್ದವ್ವ ಬೆಣ್ಣಿ, ಸುಮಾ ಮನಗೂಳಿ, ವಿಠ್ಠಲ ವಗ್ಗರ, ಉಮೇಶ ಮನಗೂಳಿ, ಮಂಜು ದಲಬಂಜನ ಇತರರಿದ್ದರು.