

ಹೊಸಕೋಟೆ: ಕೊಳವೆಬಾವಿ ಮೂಲಕ ಸರಬರಾಜು ಮಾಡುವ ನೀರು ಶಾಶ್ವತವಲ್ಲ. ಆದುದರಿಂದ ಶೀಘ್ರದಲ್ಲೇ ಕಾವೇರಿ 6ನೇ ಹಂತದ ಕಾಮಗಾರಿಯಲ್ಲಿ ಹೊಸಕೋಟೆಗೆ ಒಂದು ಟಿಎಂಸಿ ನೀರು ಹಾಯಿಸುವ ಮೂಲಕ ಹೊಸಕೋಟೆ ಜನರಿಗೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ವಿವಿಧ ವಾರ್ಡ್‌ಗಳಲ್ಲಿ ಡಾಂಬಾರು ರಸ್ತೆ, ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ, ಶಾಸಕರ ಅನುದಾನ, ಅಲ್ಪಸಂಖ್ಯಾತ ಇಲಾಖಾ ಅನುದಾನ ಹಾಗೂ 15ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆಯ ಸಿ ಅನಿರ್ಭಂದಿತ ಅನುದಾನದಲ್ಲಿ ಒಟ್ಟು 15 ಕೋಟಿ 50 ಲಕ್ಷ ರೂ.ವೆಚ್ಚದ ಕಾಮಗಾರಿಗಳಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನಗರದ ಆಕಾಶವಾಣಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಬಡಾವಣೆಗಳಲ್ಲಿ ನೀರಿನ ಸೌಲಭ್ಯ, ರಸ್ತೆ ಹಾಗೂ ಚರಂಡಿಯಂತಹ ಮೂಲಸೌಕರ್ಯ ಒದಗಿಸಬೇಕಿದ್ದು, ಡಾಂಬರು ರಸ್ತೆ, ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಅದಕ್ಕೂ ಮೊದಲು ನೀರಿನ ಸಂಪರ್ಕಕ್ಕೆ ನಗರಸಭೆ ಅಧಿಕಾರಿಗಳ ಸಭೆ ಕರೆದು, ಕೂಡಲೇ ಪೈಪ್ ಕಾಮಗಾರಿ ಮುಗಿಸುವಂತೆ ತಿಳಿಸಲಾಗುವುದು. ಕೊಳವೆಬಾವಿ ನೀರಿನ ಸಂಪರ್ಕ ಒದಗಿಸಲಾಗುವುದು ಎಂದರು. ನಿರ್ದೇಶಕರಾದ ಡಾ.ಎಚ್.ಎಂ.ಸುಬ್ಬರಾಜ್, ಕೊರಳೂರು ಸುರೇಶ್, ಮುಖಂಡರಾದ ಬಿ.ವಿ.ಬೈರೇಗೌಡ, ಸಿ.ಮುನಿಯಪ್ಪ, ವಿಜಯ್ ಕುಮಾರ್, ಉಮೇಶ್, ರಾಕೇಶ್, ಉದಯ್, ನಂಜುಂಡಪ್ಪ ಇದ್ದರು.