

ಮಂಡ್ಯ: ಕಾವೇರಿ ನದಿಗೆ ಒಳಚರಂಡಿ ನೀರು, ಘನ ತ್ಯಾಜ್ಯ, ಕೈಗಾರಿಕಾ ತ್ಯಾಜ್ಯ ಹಾಗೂ ಇತರೆ ಸ್ವರೂಪದ ಮಲಿನಕಾರಕಗಳು ಸೇರ್ಪಡೆಗೊಂಡು ನೀರು ಕಲುಷಿತವಾಗಿ ನೈಸರ್ಗಿಕ ಗುಣ ಕಳೆದುಕೊಂಡು ಮಾಲಿನ್ಯ ಉಂಟಾಗುತ್ತಿರುವ ಹಿನ್ನೆಲೆಯ್ಲಲಿ ರಾಜ್ಯಸರ್ಕಾರ, ತುರ್ತು ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಸಂಬಂಧಪಟ್ಟ ಇಲಾಖೆಗಳ ತಜ್ಞರನ್ನೊಳಗೊಂಡ ಸಮಿತಿ ರಚಿಸಿ ಆದೇಶಿಸಿದೆ.
ನೀರು ಕಲುಷಿತವಾಗಿತ್ತಿರುವುದರಿಂದ ನಾಗರಿಕರು ಮತ್ತು ಜಲಚರಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದರ ಬಗ್ಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆ ಅವರಿಗೆ ಪತ್ರ ಬರೆದು ಗಮನ ಸೆಳೆದ ಬೆನ್ನಲ್ಲೇ ರಾಜ್ಯಸರ್ಕಾರ ಕ್ರಮ ವಹಿಸಿ ಸಮಿತಿ ರಚನೆ ಮಾಡಲಾಗಿದೆ.
ಕಾವೇರಿ ನದಿಗೆ ಒಳಚರಂಡಿ ನೀರು, ಘನ ತ್ಯಾಜ್ಯ, ಕೈಗಾರಿಕೆ ತ್ಯಾಜ್ಯ ಹಾಗೂ ಇತರೆ ಸ್ವರೂಪದ ಮಲಿನಕಾರಕಗಳು ಸೇರ್ಪಡೆಗೊಂಡು ನೀರು ಕಲುಷಿತವಾಗಿ ಪರಿಸರಕ್ಕೆ ಆಗಿರುವ ಅನಾಹುತದ ತಡೆಯ ಬಗ್ಗೆ ಪರಿಶೀಲಿಸಿ 10 ದಿನಗಳ ಒಳಗಾಗಿ ವರದಿ ಸಲ್ಲಿಸಲು ರಚಿಸಲಾದ ತಜ್ಞರ ಸಮಿತಿಗೆ ಅರಣ್ಯ ಇಲಾಖೆ ಸೂಚನೆಯನ್ನು ನೀಡಿದೆ.
ಸಮಿತಿಯಲ್ಲಿ ಯಾರಿದ್ದಾರೆ?
ಸಮಿತಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮುಖ್ಯ ಪರಿಸರ ಅಧಿಕಾರಿ ನಿರಂಜನ್(ಅಧ್ಯಕ್ಷ), ಸದಸ್ಯರಾಗಿ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್, ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧೀಕ್ಷಕ ಇಂಜಿನಿಯರ್, ಮೈಸೂರು ಮಹಾನಗರ ಪಾಲಿಕೆ ಅಧೀಕ್ಷಕ ಇಂಜಿನಿಯರ್, ಮೈಸೂರು ವಿಶ್ವವಿದ್ಯಾಲಯ ಮಾನಸ ಗಂಗೋತ್ರಿ ಪರಿಸರ ವಿಜ್ಞಾನ ಸದಸ್ಯರು ಅಧ್ಯಯನ ವಿಭಾಗದ ಮುಖ್ಯಸ್ಥ, ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜ್ ಆಫ್ ಮೈಸೂರು ಪ್ರಾಧ್ಯಾಪಕ ಡಾ.ಬಿ.ಮನೋಜ್‌ಕುಮಾರ್, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯನಿರ್ವಾಹಕ ಇಂಜಿನಿಯರ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿವೃತ್ತ ಹಿರಿಯ ಪರಿಸರ ಅಧಿಕಾರಿ ಎಂ.ಬಿ.ಪ್ರಕಾಶ್ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೈಸೂರು ಪ್ರಾದೇಶಿಕ ಕಚೇರಿ ಹಿರಿಯ ಪರಿಸರ ಅಧಿಕಾರಿ ಸದಸ್ಯ ಸಂಯೋಜಕರಾಗಿ ನೇಮಿಸಲಾಗಿದೆ. ಈ ಸಮಿತಿ 10 ದಿನಗಳ ಒಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ದಿನದಂದು ಸಮಿತಿಯ ಕಾರ್ಯಾವಧಿ ಮುಕ್ತಾಯಗೊಳ್ಳುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯಸರ್ಕಾರವು ನೆಲ, ಜಲ, ರೈತರ, ನಾಗರಿಕರ ರಕ್ಷಣೆಗೆ ಸದಾ ಒಂದು ಹೆಜ್ಜೆ ಮುಂದೆ ಇರುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಜೀವನದಿ ಕಾವೇರಿ ಉಳಿವಿಗಾಗಿ ಈಗ ಸಮಿತಿಯನ್ನು ರಚನೆ ಮಾಡಿರುವುದು ಅಭಿನಂದನೀಯ ಕ್ರಮವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆ ಅವರಿಗೆ ಧನ್ಯವಾದ ಹೇಳಬಯಸುತ್ತೇನೆ.ದಿನೇಶ್ ಗೂಳಿಗೌಡವಿಧಾನ ಪರಿಷತ್ ಸದಸ್ಯ