

ಚನ್ನಗಿರಿ: ಕಾವೇರಿ ನೀರು ನಮ್ಮದು. ರಾಜ್ಯದ ಜನರಿಗೆ ಮೀಸಲಿರುವ ನೀರು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಬಿಡಬಾರದು ಎಂದು ತಾಲೂಕಿನ ನಲ್ಲೂರು ಗ್ರಾಮದ ಕನ್ನಡ ಜಾಗೃತಿ ಸಮಿತಿ ಹಾಗೂ ಜೈ ಕರ್ನಾಟಕ ಮಾಲೀಕರ ಸಂಘ ಮತ್ತು ಕನ್ನಡ ಪರ ಸಂಘಟನೆಗಳು ಮಂಗಳವಾರ ಪ್ರತಿಭಟನೆ ನಡೆಸಿದವು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ಬಿ.ಆರ್. ರುದ್ರೇಶ್ ಮಾತನಾಡಿ, ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆ ಆಗದೆ ರಾಜ್ಯ ಬರಗಾಲ ಅನುಭವಿಸುತ್ತಿದೆ. ಕುಡಿಯುವ ನೀರಿಗಾಗಿ ಜ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇರುವಂತ ನೀರು ಬೇರೆ ಕಡೆಗೆ ಹರಿಸಿದರೆ, ನಮ್ಮ ಪಾಡೇನು?. ಆದ್ದರಿಂದ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ನೀಡಬಾರದು ಎಂದರು.
ರಾಜಕೀಯ ಮಾಡುವ ನಾಯಕರು ಮುಂದೆ ಬರುವಂತಹ ಸಮಸ್ಯೆಗಳ ಅರಿವು ಮನಗಂಡು ಕಾನೂನು ಹೋರಾಟ ಮಾಡಬೇಕು. ನೆಲ, ಜಲ, ಭಾಷೆಗೆ ಕುತ್ತು ಬಂದಂತಹ ಸಮಯದಲ್ಲಿ ಕನ್ನಡಿಗರೆಲ್ಲರೂ ಒಂದಾಗಿ ಹೋರಾಟ ಮಾಡಬೇಕು. ನೀರನ್ನು ತಮಿಳುನಾಡಿಗೆ ಬಿಡಲು ರಾಜ್ಯ ಸರ್ಕಾರ ಮುಂದಾಗಿರುವುದು ಸರಿಯಲ್ಲ ಎಂದರು.
ಪ್ರತಿಭಟನೆಯಲ್ಲಿ ಸಮಿತಿ ಕಾರ್ಯದರ್ಶಿ ಪರಮೇಶ್, ಪಿ. ಕುಮಾರ್, ಮಾಜಿ ಅಧ್ಯಕ್ಷ ಮಂಜಪ್ಪ, ಅಶೋಕ್, ಪ್ರಕಾಶ್, ಕೆ. ರಾಜೇಶ್, ಆರ್. ಕಲ್ಲೇಶ್, ಕೆ.ಬಿ. ರುದ್ರಮುನಿ, ಮಲ್ಲಿಕಾರ್ಜುನ, ಪಂಚಾಕ್ಷರಿ, ವಿಷ್ಣುವರ್ಧನ್ ಅಭಿಮಾನಿ ಸಂಘದ ಅಧ್ಯಕ್ಷ ಅಣ್ಣಪ್ಪ, ಮುಜಾಹಿದ್, ಇರ್ಪಾನ್, ದಿನೇಶ್ ಮತ್ತಿತರರಿದ್ದರು.