ನೀರಿಲ್ಲದೆ ಒಣಗುತ್ತಿರುವ ಕಾವೇರಿ ಕಣಿವೆ ನಾಲೆಗಳು

SRP_02-03(a)jpj
ಶ್ರೀರಂಗಪಟ್ಟಣ ಹೊರವಲಯದ ಬಂಗಾರದೊಡ್ಡಿ ನಾಲೆಯಲ್ಲಿದ್ದ ಹೂಳನ್ನು ಜೆಸಿಬಿ ಮೂಲಕ ತೆಗೆಯುತ್ತಿರುವುದು.
Published on

ಶ್ರೀರಂಗಪಟ್ಟಣ : ಕೆಆರ್‌ಎಸ್ ಜಲಾಶಯ ಭರ್ತಿಯಾಗಿ ಕಾವೇರಿ ಮೈದುಂಬಿ ಹರಿಯುತ್ತಿದ್ದರೂ ಕೃಷಿ ಭೂಮಿಗಳಿಗೆ ನೀರೊದಗಿಸುವ ಕಾವೇರಿ ಕಣಿವೆಯ ನಾಲೆಗಳು ಮಾತ್ರ ನೀರಿಲ್ಲದೆ ಒಣಗುತ್ತಿರುವುದು ವಿಪರ್ಯಾಸವೇ ಸರಿ.

ಎರಡ್ಮೂರು ವರ್ಷಗಳ ಹಿಂದೆ ಕನ್ನಂಬಾಡಿಯಲ್ಲಿ ನೀರಿನ ಸಂಗ್ರಹ ಪ್ರಮಾಣ ಗಣನೀಯವಾಗಿ ಕುಸಿತ ಕಂಡ ಪರಿಣಾಮ ಜಿಲ್ಲೆ ಸೇರಿದಂತೆ ಕಾವೇರಿ ಅಚ್ಚುಕಟ್ಟು ಪ್ರದೇಶದ ಕೃಷಿ ಜಮೀನು ಹಾಗೂ ಜಾನುವಾರುಗಳಿಗೆ ನೀರು ಹರಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಅಂರ್ತಜಲ ಮಟ್ಟ ಕುಸಿದು ಬೆಳೆಗಳು ಒಣಗಿದ್ದವು. 20 ದಿನಗಳ ಅಂತರದಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿ ಕೊಡಗಿನ ಹಾರಂಗಿ ಹಾಗೂ ಗೊರೂರಿನ ಹೇಮಾವತಿ ಜಲಾಶಯ ಭರ್ತಿಯಾಗಿ ಕನ್ನಂಬಾಡಿ ಜಲಾಶಯಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಜಲಾಶಯ ಭರ್ತಿಯಾದರೂ ಸರ್ಕಾರ ಹಾಗೂ ಕಾವೇರಿ ನೀರಾವರಿ ನಿಗಮದ ಎಡವಟ್ಟಿನಿಂದ ನಾಲೆಗಳಲ್ಲಿ ನೀರು ಹರಿಯಲಿಲ್ಲ. ಬದಲಾಗಿ ನದಿಯಲ್ಲಿ ಸುಮಾರು 57 ಟಿಎಂಸಿಯಷ್ಟು ನೀರು ರಾಜ್ಯದ ರೈತರ ಪಾಲಿಗೆ ಯಾವುದೇ ಉಪಯೋಗಕ್ಕೆ ಬಾರದೆ ತಮಿಳುನಾಡಿಗೆ ಹರಿಯಿತು.

ಕಾವೇರಿ ನದಿ ಸಂಪರ್ಕ ನಾಲೆಗಳಲ್ಲಿನ ಹೂಳು ಹಾಗೂ ತ್ಯಾಜ್ಯವನ್ನು ಸರಿಯಾದ ಸಮಯದಲ್ಲಿ ತೆರವುಗೊಳಿಸುವಲ್ಲಿ ಕಾವೇರಿ ನೀರಾವರಿ ನಿಗಮ ವಿಫಲವಾದ ಪರಿಣಾಮ ಕಾವೇರಿ ಅಚ್ಚುಕಟ್ಟು ಪ್ರದೇಶದ ವಿರಿಜಾ, ದೇವರಾಯ, ಬಂಗಾರದೊಡ್ಡಿ ಅಣೆಕಟ್ಟೆಗಳ ನಾಲೆಗಳಿಗೆ ನೀರು ಹರಿಸಲು ತೂಬುಗಳನ್ನು ತೆರೆದಿಲ್ಲ. ಈ ನಡುವೆ ಎರಡ್ಮೂರು ದಿನಗಳಿಂದ ಬಂಗಾರದೊಡ್ಡಿ, ವಿರಿಜಾ ನಾಲೆ ಸೇರಿದಂತೆ ವಿವಿಧ ನಾಲೆಗಳಲ್ಲಿ ಹೂಳನ್ನು ಜೆಸಿಬಿ ಹಾಗೂ ಸವಡೆಗಳ ಮೂಲಕ ಆತುರವಾಗಿ ತೆರವುಗೊಳಿಸಿ ಸ್ವಚ್ಛ ಮಾಡುವ ಮೂಲಕ ನೀರು ಹರಿಸುವ ಕೆಲಸ ಮಾಡಲಾಗುತ್ತಿದೆ.

ತಾಲೂಕಿನ ಮೇಳಾಪುರದಿಂದ ಮೈಸೂರಿನವರೆಗೂ ಹರಿಯುವ ದೇವರಾಯ ನಾಲೆಯಲ್ಲಿ 86 ಕ್ಯೂಸೆಕ್, ಬಲಮುರಿ ಆಣೆಯಿಂದ ಬನ್ನೂರು ರಸ್ತೆಯ ಹಾರೋಹಳ್ಳಿವರೆಗೂ 69 ಕಿ.ಮೀ ಹರಿಯುವ ವಿರಿಜಾ ನಾಲೆಯಲ್ಲಿ 400 ಕ್ಯೂಸೆಕ್ ಹಾಗೂ ಚಂದ್ರವನದಿಂದ ಗಂಜಾಂನ ಗುಂಬಸ್‌ವರೆಗೂ 8 ಕಿಮೀ ಹರಿಯುವ ಬಂಗಾರದೊಡ್ಡಿ ನಾಲೆಯಲ್ಲಿ 36 ಕ್ಯೂಸೆಕ್ ನೀರನ್ನು ಹೊರಬಿಡಲು ನಿಗಮ ಈಗಾಗಲೇ ತರಾತುರಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ.

ಇನ್ನು ಕನ್ನಂಬಾಡಿಯಿಂದ ಬನ್ನೂರಿನವರೆಗಿನ 25 ಸಾವಿರ ಹೆಕ್ಟೇರ್ ಪ್ರದೇಶದ ಕೃಷಿ ಜಮೀನಿಗೆ ನೀರುದೊಗಿಸಲು 990 ಕ್ಯೂಸೆಕ್ ಸಾಮರ್ಥ್ಯದಲ್ಲಿ ಹರಿಯುವ ಸಿಡಿಎಸ್ ನಾಲೆಯಲ್ಲಿ ಜು.1ರಿಂದಲೇ ನೀರು ಹರಿಸಲಾಗುತ್ತಿದ್ದು, ಪ್ರಸ್ತುತ ಅವಶ್ಯವಿರುವ 650 ಕ್ಯೂಸೆಕ್ ಮಾತ್ರ ಹೊರಬಿಡಲಾಗಿದೆ. ಅದರಂತೆ ಜಲಾಶಯದಿಂದ ಮೈಸೂರಿನ ಬೆಲವತ್ತವರೆಗೂ ಹರಿಯುವ ಆರ್‌ಬಿಎಲ್‌ಎಲ್ ನಾಲೆಯಲ್ಲೂ 250 ಕ್ಯೂಸೆಕ್ ಹರಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net