ಕೊಡಗಿನ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ: ಕಾವೇರಮ್ಮನ ದರ್ಶನಕ್ಕೆ ಹರಿದು ಬಂದ ಭಕ್ತರ ದಂಡು

kaveri
Published on

ಕೊಡಗು: ಕಾವೇರಿಯ ಉಗಮಸ್ಥಾನವಾದ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವವಾಗಿದೆ. ನಿಗದಿತ ಸಮಯಕ್ಕೆ ಸರಿಯಾಗಿ ಕಾವೇರಿ ತನ್ನ ಅಸಂಖ್ಯಾತ ಭಕ್ತಾಧಿಗಳಿಗೆ ದರ್ಶನ ನೀಡಿದ್ದಾಳೆ. ಸಾವಿರಾರು ಭಕ್ತಾಧಿಗಳು ಆ ರೋಚಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಕಾವೇರಿಯ ದರ್ಶನ ಪಡೆದು, ತೀರ್ಥ ಸ್ನಾನ ಮಾಡಿ ಪುನೀತರಾದರು.

ತೀರ್ಥಸ್ನಾನ ಮಾಡಿ ಪುನೀತರಾದ ಭಕ್ತಾಧಿಗಳು
ಎಲ್ಲಿ ನೋಡಿದರೂ ಸಾವಿರಾರು ಭಕ್ತಾಧಿಗಳ ನೂಕುನುಗ್ಗಲು. ಭಕ್ತಾಧಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ. ಮತ್ತೊಂದೆಡೆ ಅರ್ಚಕರ ಮಂತ್ರಘೋಷ. ಇದು ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ರಾತ್ರಿ ಕಂಡು ಬಂದ ದೃಶ್ಯ. ದಕ್ಷಿಣದ ಗಂಗೆ ಎಂದು ಕರೆಯಲ್ಪಡುವ ಕಾವೇರಿ ನಿಗದಿತ ಸಮಯಕ್ಕೆ ಸರಿಯಾಗಿ ಮಧ್ಯರಾತ್ರಿ 1 ಗಂಟೆ 27 ನಿಮಿಷಕ್ಕೆ ತೀರ್ಥ ರೂಪದಲ್ಲಿ ಅಸಂಖ್ಯಾತ ಭಕ್ತಾಧಿಗಳಿಗೆ ತನ್ನ ದರ್ಶನ ನೀಡಿದ್ದಾಳೆ. ಸಾವಿರಾರು ಭಕ್ತಾಧಿಗಳು ಕಾವೇರಿಯ ತೀರ್ಥ ಪಡೆದು ತೀರ್ಥಸ್ನಾನ ಮಾಡಿ ಪುನೀತರಾಗಿದ್ದಾರೆ.

ಗಣ್ಯರು ಭಾಗಿ
ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಎರಡು ಗಂಟೆಗೆ ಮೊದಲೇ ಮುಖ್ಯ ಅರ್ಚಕರಾದ ಪ್ರಶಾಂತ್ ಆಚಾರ್ ಅವರ ನೇತೃತ್ವದ ಸುಮಾರು 9 ಅರ್ಚಕರ ತಂಡ ಕಾವೇರಿ ತೀರ್ಥ ಕುಂಡಿಕೆಗೆ ಪೂಜೆ ವಿಧಿವಿಧಾನಗಳನ್ನು ಆರಂಭಿಸಿತ್ತು. ಅರ್ಚಕರ ಮಂತ್ರಘೋಷ ಹಾಗೂ ಭಕ್ತಾದಿಗಳ ಕಾವೇರಿ ಮಾತಾ ಜೈ ಜೈ ಮಾತಾ ಎಂಬ ಉದ್ಘೋಷ ಮೊಳಗುತ್ತಿತ್ತು. ಕುಂಡಿಕೆಗೆ ಕೊನೆಯ ಮಹಾಮಂಗಳಾರತಿ ನಡೆಯುತ್ತಿದ್ದಂತೆ ಪುಟ್ಟದಾದ ತೀರ್ಥ ಕುಂಡಿಕೆಯಲ್ಲಿ ಕಾವೇರಿ ತೀರ್ಥರೂಪದಲ್ಲಿ ಭಕ್ತಾಧಿಗಳಿಗೆ ತನ್ನ ದರ್ಶನ ಭಾಗ್ಯ ಕರುಣಿಸಿದಳು. ಆ ರೋಮಾಂಚನ ಕ್ಷಣವನ್ನು ನೋಡಿ ಸಾವಿರಾರು ಭಕ್ತಾಧಿಗಳು ಪುನೀತರಾದರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಭೋಸರಾಜು,ಸಂಸದ ಪ್ರತಾಪ್ ಸಿಂಹ ಕೊಡಗಿನ ಶಾಸಕರುಗಳು ಸೇರಿದಂತೆ ಸಾಕಷ್ಟು ಗಣ್ಯರು ಈ ಸಂದರ್ಭ ಹಾಜರಿದ್ದರು.

ಪಾದಯಾತ್ರೆ ಮೂಲಕ ಆಗಮಿಸಿದ ಹರ್ಷಿಕಾ-ಭುವನ್
ರಾತ್ರಿ ಕಾವೇರಿ ತೀರ್ಥೋದ್ಬವದ ಹಿನ್ನಲೆಯಲ್ಲಿ ಬೆಳಗ್ಗಿನಿಂದಲೇ ಭಕ್ತಾಧಿಗಳು ತಲಕಾವೇರಿಗೆ ಆಗಮಿಸುತ್ತಿದ್ದ ದೃಶ್ಯ ಕಂಡು ಬಂತು. ತೀರ್ಥೋದ್ಭವದ ಆ ಕ್ಷಣವನ್ನು ನೋಡಲು ಭಕ್ತಾಧಿಗಳಿಗೆ ಅನುಕೂಲವಾಗಲೆಂದು ಎಲ್​ಸಿಡಿ ಪರದೆಯ ವ್ಯವಸ್ಥೆಯನ್ನು ಮಾಡಲಾಗಿತ್ತು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಹಾಗೂ ತಮಿಳುನಾಡು, ಕೇರಳದಿಂದಲೂ ಭಕ್ತಾಧಿಗಳು ಆಗಮಿಸಿದ್ದರು. ತೀರ್ಥಕ್ಕಾಗಿ ಬಿಂದಿಗೆ, ಬಾಟಲ್​ ಗಳನ್ನು ಹಿಡಿದು ಭಕ್ತಾದಿಗಳು ಮುಗಿಬೀಳುತ್ತಿದ್ದ ದೃಶ್ಯ ಕಂಡು ಬಂತು. ತೀರ್ಥವನ್ನು ನೀಡಲು ಅರ್ಚಕರಿಗೆ ಪೊಲೀಸರು ನೆರವಾದರು. ಭಕ್ತಾಧಿಗಳ ಆಗಮನದ ಹಿನ್ನಲೆಯಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ಇನ್ನೂ ಚಿತ್ರನಟಿ ಹರ್ಷಿಕಾ ಪೂಣಚ್ಚ-ನಟ ಭುವನ್ ಪೊನ್ನಣ್ಣ ದಂಪತಿಗಳು ತಲಕಾವೇರಿಗೆ ಪಾದಯಾತ್ರೆ ಮೂಲಕ ಆಗಮಿಸಿದ್ದರು.
ಇಂದು ಕೂಡ ಸಾಕಷ್ಟು ಭಕ್ತಾಧಿಗಳು ತಲಕಾವೇರಿಗೆ ಭೇಟಿ ನೀಡಲಿದ್ದಾರೆ. ಕೊಡಗು ಜಿಲ್ಲೆಯ ಮನೆ ಮನೆಗಳಲ್ಲಿ ವಿಶೇಷವಾಗಿ ಕಾವೇರಿಗೆ ಪೂಜೆಯನ್ನು ಸಲ್ಲಿಸಿ ಸಂಕ್ರಮಣ ಹಬ್ಬವನ್ನು ಆಚರಣೆ ಮಾಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net