110 ಹಳ್ಳಿಗಳ ನೀರಿನ ಸಮಸ್ಯೆಗೆ ಕೊನೆಗೂ ಮುಕ್ತಿ; ಕಾವೇರಿ 5ನೇ ಹಂತದ ಯೋಜನೆಗೆ ಅ.16ಕ್ಕೆ ಚಾಲನೆ

BWSSB
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮಹತ್ವದ ಕಾವೇರಿ 5ನೇ ಹಂತದ ಯೋಜನೆಗೆ ಅ.16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಚಾಲನೆ ನೀಡಲಿದ್ದಾರೆ.

ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್​ ಪ್ರಸಾತ್​ ಮನೋಹರ್​ ಯೋಜನೆಯ ಉದ್ಘಾಟನಾ ಕಾರ್ಯಕ್ರಮದ ಆಹ್ವಾನಪತ್ರಿಕೆಯನ್ನು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್​ ಅವರನ್ನು ಭೇಟಿಯಾಗಿ ಆಮಂತ್ರಿಸಿದರು.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ(ಟಿ.ಕೆ.ಹಳ್ಳಿ)ಯ ಜಲಮಂಡಳಿ ಆವರಣದಲ್ಲಿ ಬೆಳಗ್ಗೆ 10.30ಕ್ಕೆ ಲೋಕಾರ್ಪಣೆಯಾಗಲಿದೆ. ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕಾರ್ಯಕ್ರಮದ ಅಧ್ಯತೆ ವಹಿಸಲಿದ್ದಾರೆ. ಜೈಕಾ ಇಂಡಿಯಾ ಕಚೇರಿಯ ಮುಖ್ಯ ಪ್ರತಿನಿಧಿ ಟೇಕುಚಿ ಟಕುರೋ, ಕೌನ್ಸಲ್​ ಜನರಲ್​ ಆಫ್ ಜಪಾನ್​ ಇನ್​ ಇಂಡಿಯಾದ ಟ್ಸುಟೋಮು, ಭಾರತದಲ್ಲಿ ಜಪಾನ್​ ರಾಯಭಾರ ಕಚೇರಿಯ ಆರ್ಥಿಕ ಸಚಿವ(ಆರ್ಥಿಕ ಮತ್ತು ಅಭಿವೃದ್ಧಿ)ಹೊಕುಗೋ ಕ್ಯೋಕು ವಿಶೇಷ ಆಹ್ವಾನಿತರಾಗಿದ್ದಾರೆ.

ಸುಧಾರಿತ ಬೂಸ್ಟರ್​ ಪಂಪಿಂಗ್​ ಕೇಂದ್ರ

ಕಾವೇರಿ 5ನೇ ಹಂತದ ಯೋಜನೆಯಲ್ಲಿ ಟಿ.ಕೆ.ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಮೂರು ಅತ್ಯಾಧುನಿಕ ತಂತ್ರಾನದ ಸುಧಾರಿತ ಬೂಸ್ಟರ್​ ಪಂಪಿಂಗ್​ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಇವುಗಳ ಸಹಾಯದಿಂದ ಸುಮಾರು 110 ಕಿ.ಮೀ. ದೂರದಿಂದ 500 ಹಾಗೂ 2,200 ಎಂಎಂ ನಷ್ಟು ವ್ಯಾಸದ ಬೃಹತ್​ ಉಕ್ಕಿನ ಪೈಪ್​ಗಳ ಮೂಲಕ ಕಾವೇರಿ ನೀರನ್ನು 450 ಮೀ. ಎತ್ತರಕ್ಕೆ ಹರಿಸಿ ನೀರು ಪೂರೈಸಲಾಗುತ್ತದೆ. ಈ ಯೋಜನೆಗೆ 1,45,000 ಮೆಗಾ ಟನ್​ ಸ್ಟೀಲ್​ ಪ್ಲೇಟ್​ಗಳನ್ನು ಬಳಸಲಾಗಿದೆ.

ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಭವಿಷ್ಯದ ದೂರದೃಷ್ಟಿಯನ್ನಿಟ್ಟುಕೊಂಡು ಕಾವೇರಿ 5ನೇ ಹಂತದ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದರಿಂದ 110ಹಳ್ಳಿಗಳ ನಿವಾಸಿಗಳಿಗೆ ಹಾಗೂ ಬೆಂಗಳೂರು ನಗರದ ಜನರಿಗೆ ಸಮರ್ಪಕವಾಗಿ ನೀರು ಸರಬರಾಜಾಗಲಿದೆ.

- ಡಿ.ಕೆ.ಶಿವಕುಮಾರ್​, ಉಪಮುಖ್ಯಮಂತ್ರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net