ನದಿ ಜೋಡಣೆಯೊಂದೇ ಕಾವೇರಿ ನೀರಿನ ಸಮಸ್ಯೆ ಪರಿಹಾರ: ನಿವೃತ್ತ ಕಾರ್ಯದರ್ಶಿ ಕ್ಯಾಪ್ಟನ್ ರಾಜಾರಾವ್ ಸಲಹೆ

Cauvery river water dispute National Seminar mandya
Published on

ಮಂಡ್ಯ: ಅಂತಾರಾಜ್ಯ ನೀರಿನ ಸಮಸ್ಯೆಗೆ ನದಿಗಳ ಜೋಡಣೆಯೊಂದೇ ಭವಿಷ್ಯದ ಪರಿಹಾರದ ಮಾರ್ಗೋಪಾಯವಾಗಿದೆ. ಇನ್ನು ಮುಂದೆ ಕಾಲುವೆಗಳ ಮೂಲಕ ನೀರು ಹರಿಸುವಷ್ಟು ಸಂಪತ್ತನ್ನು ಪ್ರಕೃತಿ ಕರುಣಿಸುವುದಿಲ್ಲ. ಪರಿಣಾಮ ಪೈಪ್‌ಗಳ ಮೂಲಕವೇ ನೀರಾವರಿ ಮಾಡಬೇಕಾದ ಸನ್ನಿವೇಶ ಬಹಳ ದೂರವೇನೂ ಇಲ್ಲ ಎಂದು ಜಲಸಂಪನ್ಮೂಲ ಮತ್ತು ಪರಿಸರ ಇಲಾಖೆಯ ನಿವೃತ್ತ ಕಾರ್ಯದರ್ಶಿ ಕ್ಯಾಪ್ಟನ್ ರಾಜಾರಾವ್ ಆತಂಕ ವ್ಯಕ್ತಪಡಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಎಸ್.ಬಿ ಎಜುಕೇಷನ್ ಟ್ರಸ್ಟ್, ಮಾಂಡವ್ಯ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ಕಾವೇರಿ: ಪ್ರಕೃತಿಯ ಪ್ರಸಾದ ಮನುಷ್ಯರ ವಿವಾದ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ನಮ್ಮ ರಾಜ್ಯದಲ್ಲೇ ಬೀಳುವ ಸರಾಸರಿ 2 ಸಾವಿರ ಟಿಎಂಸಿ ನೀರು ವ್ಯರ್ಥವಾಗಿ ಹರಿದು ಬಂಗಾಳಕೊಲ್ಲಿ ಸೇರುತ್ತದೆ. ಇದನ್ನು ಹಿಡಿದಿಟ್ಟುಕೊಂಡು ಬಳಸಿಕೊಳ್ಳುವ ಸಾಮರ್ಥ್ಯ ತಮಿಳುನಾಡಿನಲ್ಲಿ ಇಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ತಮಿಳುನಾಡಿಗೆ ಯಾವುದೇ ನಿರ್ದೇಶನ ನೀಡದಿರುವದು ದುರ್ದೈವ. ಪ್ರಮುಖ ಅಂಶವೆಂದರೆ ಕಾವೇರಿ ನದಿ ನೀರಿನ 2ನೇ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದರೆ ಉಳಿದ ಶೇ.50ರಷ್ಟು ನೀರನ್ನು ಹಂಚಿಕೆ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇಂತಹ ನಿರ್ಲಕ್ಷ್ಯದ ಪರಿಣಾಮದಿಂದ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಭಾರತ ಮತ್ತು ಪಾಕಿಸ್ತಾನದಂತಹ ವೈಷಮ್ಯದ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ನಮ್ಮ ರೈತರು ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಇನ್ನು ಪ್ರತಿ ಬಾರಿ ಕಾವೇರಿ ವಿವಾದ ಭುಗಿಲೆದ್ದ ಸಂದರ್ಭದಲ್ಲಿ ಸರ್ಕಾರ ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗುವುದರಿಂದ ನಿರೀಕ್ಷಿತ ವೇಳೆಯಲ್ಲಿ ಪರಿಹಾರ ದೊರಕುವುದಿಲ್ಲ. ಆದ್ದರಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಯ ಪ್ರದತ್ತ ಅಧಿಕಾರದಲ್ಲಿ ಈ ವಿವಾದವನ್ನು ಏಕೆ ಬಗೆಹರಿಸಬಾರದು ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಈ ಬಗ್ಗೆ ಆಧ್ಯ ಗಮನ ನೀಡಿ ಪ್ರಯತ್ನಿಸಿದರೆ ಸಂಕಷ್ಟ ಕಾಲದಲ್ಲಿ ಕಾವೇರಿ ಸಮಸ್ಯೆಯನ್ನು ಬಗೆಹರಿಸಿ ಎರಡೂ ರಾಜ್ಯಗಳ ರೈತರಿಗೆ ಅನುಕೂಲ ಮಾಡಿಕೊಡಬಹುದು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ಇಂದಿಗೂ ಕೂಡ ರಾಷ್ಟ್ರೀಯ ಜಲನೀತಿಗೆ ಮಾರ್ಗಸೂಚಿ ರೂಪಿಸದಿರುವುದು ಅತ್ಯಂತ ಸೋಜಿಗದ ಸಂಗತಿ. ನನ್ನ ಅಧಿಕಾರಾವಧಿಯಲ್ಲೇ ದೇಶದಲ್ಲಿ 17-18 ಪ್ರಾಧಿಕಾರ ಕಂಡಿದ್ದೇನೆ. ಆದರೆ, ಕಾವೇರಿ ವಿಚಾರದಲ್ಲಿ ರೂಪುಗೊಂಡ ಪ್ರಾಧಿಕಾರ ಈಗಲೂ ಸ್ಪಷ್ಟ ನಿಲುವು ತಾಳದಿರುವುದು ಅಚ್ಚರಿಯ ಸಂಗತಿ. ಈ ಪ್ರಾಧಿಕಾರ ಒಂದು ರೀತಿಯ ಪುನರ್ವಸತಿ ಕೇಂದ್ರದಂತಾಗಿದೆ ಎಂದು ಟೀಕಿಸಿದ ಅವರು, 1983ರಲ್ಲಿ ಸುಪ್ರೀಂ ಕೋರ್ಟಿಗೆ ಕಾವೇರಿ ವಿವಾದ ಪ್ರವೇಶಿಸಿದ್ದ ನಂತರ 1990ರಲ್ಲಿ ವಿಚಾರಣೆ ನಡೆದು ಅಂದು ಮುಖ್ಯ ನ್ಯಾಯಮೂರ್ತಿ ಜಗನ್ನಾಥ್ ಮಿಶ್ರಾ ಅವರು ಈ ಕೂಡಲೇ ಪ್ರಾಧಿಕಾರ ರಚಿಸಿ ಎಂದು ಆದೇಶವನ್ನೇ ಹೊರಡಿಸಿದರು. ಅದಾದ 17 ವರ್ಷ ವ್ಯರ್ಥವಾಗಿ ಹೋಯಿತು. ಇದು ನಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಂಶುಪಾಲ ಪ್ರೊ.ಎಂ.ಕೃಷ್ಣೇಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿವೃತ್ತ ಕುಲಪತಿ ಡಾ.ಚಂದ್ರಶೇಖರ್, ವಿಶ್ಲೇಷಕ ಅರ್ಜುನಹಳ್ಳಿ ಪ್ರಸನ್ನಕುಮಾರ್, ರೈತ ಹೋರಾಟಗಾರ್ತಿ ಸುನಂದಾ ಜಯರಾಂ, ಪ್ರೊ.ಕೆ.ಸಿ.ಬಸವರಾಜು, ಡಾ.ಪಿ.ಎಸ್.ರಾವ್, ನಿವೃತ್ತ ಮುಖ್ಯಇಂಜಿನಿಯರ್ ರವಿಶಂಕರ್ ದೋಂತಿ, ಪ್ರಾಧ್ಯಾಪಕರಾದ ಪುಷ್ಪಾ ತುಪ್ಪದ್, ಶ್ಯಾಂಪ್ರಸಾದ್, ಎಸ್.ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಡಾ.ಕೆ.ಸಿ.ಜಯರಾಂ, ಡಾ.ಎ.ಜಯರಾಂ, ಕೆ.ಸಿ.ಭವಾನಿ ಶಂಕರ್ ಇತರರಿದ್ದರು.

ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ ಮಾತನಾಡಿ, ಆಧುನಿಕ ತಾಂತ್ರಿಕತೆ ನದಿ ನೀರಿನ ಪ್ರಮಾಣವನ್ನು ಕುಳಿತಲ್ಲೇ ದೊರಕಿಸುವಂತಹ ಎಲ್ಲ ನೈಪುಣ್ಯವನ್ನು ಹೊಂದಿದೆ. ಇದರ ಸದ್ಬಳಕೆಯಿಂದ ನಮಗೆ ಲಭ್ಯವಾಗುವ ನೀರಿನ ಪ್ರಮಾಣವನ್ನು ಮೊದಲೇ ಪಡೆದುಕೊಳ್ಳಲು ಸಾಧ್ಯವಿದೆ ಎಂದರು.
ಪ್ರಕೃತಿಯಲ್ಲಿ ಮಳೆ ನೀರು ವಾಡಿಕೆಯಷ್ಟೇ ಬೀಳುತ್ತದೆ. ಆದರೆ, ಜನಸಂಖ್ಯೆ ಹೆಚ್ಚಾದ ಪರಿಣಾಮ ನೀರಿನ ಬಳಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕುಡಿಯಲು, ಕೃಷಿಗೆ, ಕೈಗಾರಿಕೆಗಳು ಸೇರಿದಂತೆ ಬಳಕೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ಬೆಂಗಳೂರು ನಗರಕ್ಕೆ ಮಾತ್ರವೇ 60 ಟಿಎಂಸಿ ನೀರು ಕೊಡಿ ಎಂಬ ಬೇಡಿಕೆ ಬಂದಿದೆ. ಕೆ.ಆರ್.ಎಸ್ ಅಣೆಕಟ್ಟೆ ಸೇರಿದಂತೆ ಕಾವೇರಿ ಕೊಳ್ಳದಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣಕ್ಕೂ, ನೀರಿನ ಬೇಡಿಕೆಗೂ ಅಜಗಜಾಂತರ ವ್ಯತ್ಯಾಸವಾಗುತ್ತಿದೆ. ಪರಿಣಾಮ ವ್ಯವಸಾಯದಲ್ಲಿ ಬಳಸುತ್ತಿರುವ ನೀರಿನ ಪ್ರಮಾಣದಲ್ಲಿ ಶೇ.10ರಷ್ಟು ಉಳಿಸಿ ಕುಡಿಯುವ ನೀರಿಗೆ ದೊರಕಿಸಬೇಕಾದ ಸನ್ನಿವೇಶ ಎದುರಾಗಿದೆ ಎಂದರು.
ಪ್ರಸ್ತುತ ದಿನದಲ್ಲಿ ಹನಿ ನೀರಾವರಿ ಹಳೇ ಪದ್ಧತಿಯಂತಾಗಿದೆ. ಬದಲಿಗೆ ಬಿಂದು ನೀರಾವರಿ ಪದ್ಧತಿ ಬರುತ್ತಿದೆ. ಇದು ನಮ್ಮ ದೇಶಕ್ಕೆ ಹೊಸದು. ಇಸ್ರೇಲ್ ದೇಶಕ್ಕೆ ಹಳೆಯದ್ದಾಗಿದೆ. ಈ ಎಲ್ಲ ಕಾರಣಗಳಿಂದ ನಮ್ಮ ರೈತರೂ ಕೂಡ ಬದಲಾವಣೆಗೆ ತೆರೆದುಕೊಳ್ಳಬೇಕಾದ ಸನ್ನಿವೇಶ ಎದುರಾಗಿದೆ. ಎಲ್ಲಿ ಮೋಡಗಳು ಸಾಂಧ್ರವಾಗಿ ಮಳೆ ತರಿಸುತ್ತದೆ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳುವ ತಂತ್ರಜ್ಞಾನ ಲಭ್ಯವಿದೆ. ಈ ತಾಂತ್ರಿಕತೆಯನ್ನು ಬಳಸಿಕೊಂಡು ನಾವು ನೀರಿನ ನಿರ್ವಹಣೆ ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net