ತ.ನಾಡಿಗೆ ಹರಿಯುತ್ತಿರುವ ನೀರು ನಿಲ್ಲಿಸದಿದ್ದರೆ ಕ್ಷೇತ್ರವಾರು ಹೋರಾಟ: ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಎಚ್ಚರಿಕೆ

1
Published on

ಮಂಡ್ಯ: ಕೆಆರ್‌ಎಸ್ ಜಲಾಶಯದಿಂದ ತ.ನಾಡಿಗೆ ಹರಿದು ಹೋಗುತ್ತಿರುವ ನೀರು ತಕ್ಷಣ ನಿಲುಗಡೆ ಮಾಡಬೇಕು. ಇಲ್ಲದಿದ್ದರೆ ಕನ್ನಂಬಾಡಿ ಅಣೆಕಟ್ಟೆ ಬಾಗಿಲು ಮುಚ್ಚಿಸಲು ಕ್ಷೇತ್ರವಾರು ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಏಕಪಕ್ಷೀಯ ತೀರ್ಮಾನದಿಂದ ನೀರು ಹರಿಸಿ ರಾಜ್ಯದ ರೈತರನ್ನು ಸಂಕಷ್ಟಕ್ಕೆ ದೂಡುತ್ತಿರುವ ರಾಜ್ಯ ಸರ್ಕಾರದ ಕಣ್ಣು ತೆರೆಸಲು ಪ್ರತಿಭಟನೆ ಅನಿವಾರ್ಯವಾಗಿದೆ. ಕಾಂಗ್ರೆಸ್ ಸರ್ಕಾರಕ್ಕೆ ನೆಲ, ಜಲದ ಬಗ್ಗೆ ಆಸಕ್ತಿ ತೋರಿದ್ದರೆ ಇಂತಹ ದುಃಸ್ಥಿತಿ ಬರುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕೌಶಲದಿಂದ ರಾಜ್ಯಕ್ಕೆ 14.71 ಟಿಎಂಸಿ ಹೆಚ್ಚುವರಿ ನೀರು ಲಭ್ಯವಾಗಿದೆ. ಆದರೆ ರಾಜ್ಯ ಸರ್ಕಾರ ನಿರ್ಲಕ್ಷೃ ತೋರಿದ ಪರಿಣಾಮ ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟೆಗಳು ಬರಿದಾಗುತ್ತಿವೆ. ನೀರಿನ ವಿಚಾರದಲ್ಲಿ ತಮಿಳನಾಡಿನಂತೆ ತುರ್ತು ಗಮನ ಹರಿಸುವ ಚಿಂತನೆ ರಾಜ್ಯ ಸರ್ಕಾರಕ್ಕೆ ಏಕೆ ಸಾಧ್ಯವಾಗಲಿಲ್ಲ ಎಂದರು.

ಮಳವಳ್ಳಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ಮುಖ್ಯಮಂತ್ರಿಯಾಗಲು ಜಿಲ್ಲೆಯ ಜನರ ಮತಯಾಚಿಸಿದ ಉಪಮುಖ್ಯಮಂತ್ರಿ ಶಿವಕುಮಾರ್ ಅವರು ಮನುಷ್ಯತ್ವ ಮತ್ತು ಮಾನವೀಯತೆ ಮರೆತು ಅಧಿಕಾರ ಉಳಿಸಿಕೊಳ್ಳಲು ಕಾವೇರಿ ಭಾಗದ ರೈತರ ಹಿತವನ್ನು ಬಲಿ ಕೊಟ್ಟಿದ್ದಾರೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಜಯಗಳಿಸಿರುವ ಕಾಂಗ್ರೆಸ್ ಶಾಸಕರು ರೈತರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ. ಒಂದು ವೇಳೆ ರೈತರ ಆಕ್ರೋಶದ ಬೆಂಕಿ ಚೆಂಡನ್ನು ವಿಧಾನಸೌಧಕ್ಕೆ ಎಸೆದರೆ, ಆಡಳಿತ ನಡೆಸುವವರು ಸುಟ್ಟು ಹೋಗುತ್ತಾರೆ. ರೈತರ ಜ್ವಾಲೆಗೆ ನಲುಗಬೇಕಾಗುತ್ತದೆ ಎಚ್ಚರಿಸಿದರು.

ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ಮಾತನಾಡಿ, ರಾಜ್ಯದ ನೆಲ, ಜಲದ ರಕ್ಷಣೆ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಎಲ್ಲ ಕ್ಷೇತ್ರದಲ್ಲಿ ಶೋಷಣೆ ಮಾಡುತ್ತಿದೆ. ರೈತರಿಗೆ ನೀರು ನೀಡಲು ಷರತ್ತು ವಿಧಿಸುವ ಸರ್ಕಾರ, ತಮಿಳುನಾಡಿಗೆ ನೀರು ಹರಿಸಲು ಯಾವುದೇ ಮಾನದಂಡ ಬಳಸದಿರುವುದು ನ್ಯಾಯೋಚಿತವೇ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net